ಗ್ರಾಮೀಣ ಶಿಕ್ಷಣ -

	ವಿಶ್ವದ ಜನಸಂಖ್ಯೆಯ 2/3ಕ್ಕಿಂತ ಹೆಚ್ಚು ಪಾಲು ಗ್ರಾಮಗಳಲ್ಲಿ ಅಥವಾ ಸಣ್ಣ ಪುಟ್ಟ ನಗರಗಳಲ್ಲಿ ವಾಸಿಸುವುದರಿಂದ, ಶಿಕ್ಷಣ ಬಹು ಮಟ್ಟಿಗೆ ಗ್ರಾಮೀಣ ಶಿಕ್ಷಣವೇ ಆಗುತ್ತದೆಂದು ಹೇಳುವುದುಂಟು. ಆದರೂ ಸಮಾಜ ವಿಜ್ಞಾನಿಗಳು ನಗರ ಮತ್ತು ಗ್ರಾಮೀಣ ಶಿಕ್ಷಣಗಳಲ್ಲಿ ವ್ಯತ್ಯಾಸ ಕಲ್ಪಿಸಿರುವರು. ವ್ಯವಸಾಯವನ್ನು ಮುಖ್ಯ ಕಸಬನ್ನಾಗಿ ಅವಲಂಬಿಸಿರುವ ಗ್ರಾಮವಾಸಿಗಳು ನಗರದವರೊಡನೆ ಹೋಲಿಸಿದೆ ಬಡವರು ; ಅವರಲ್ಲಿ ಅರ್ಧದಷ್ಟು ಮಂದಿ ಸರಿಯಾದ ಮನೆಮಠಗಳಿಲ್ಲದೆ ಹಸಿವು ತೃಷೆಗಳಿಂದ ನರಳುತ್ತ ಬಾಳುತ್ತಿರುವವರು. ಅಂಥವರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಣವೀಯುವ ಶಕ್ತಿ ಇರುವುದಿಲ್ಲ. ಅಂಥ ಅನೇಕ ದೇಶಗಳು ಬಹಮಟ್ಟಿಗೆ ತಮ್ಮ ಆರ್ಥಿಕಾಭಿವೃದ್ದಿಗೆ ವ್ಯವಸಾಯವನ್ನೇ ಅವಲಂಬಿಸಿರುವುದರಿಂದ ಶಿಕ್ಷಣಕ್ಕಾಗಿ ಹೆಚ್ಚು ಹಣ ವ್ಯಯಮಾಡುವ ಶಕ್ತಿ ಹೊಂದಿರುವುದಿಲ್ಲ. ಈ ಕಾರಣಗಳಂದಾಗಿ ಅಲ್ಲಿನವರು ಸಾಮಾಜಿಕವಾಗಿ ಹಿಂದುಳಿದಿದ್ದು ಅವರ ಜೀವನದ ಮಟ್ಟ ತುಂಬ ಅಸಮರ್ಪಕವಾಗಿರುತ್ತದೆ. ಒಟ್ಟಿನಲ್ಲಿ ಗ್ರಾಮೀಣ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿಗೆ ಶಿಕ್ಷಣ ಸೌಲಭ್ಯವಿಲ್ಲದೆ ಅನಕ್ಷರಸ್ಥರಾಗಿರುತ್ತವೆ ; ತೀರ ಕೆಳಮಟ್ಟದ ಜೀವನ ನಡೆಸುತ್ತ ಅಜ್ಞಾನ, ಅನಾರೋಗ್ಯ, ದಾರಿದ್ರ್ಯ ಇವುಗಳಿಗೆ ತುತ್ತಾಗಿರುತ್ತಾರೆ. ಶಿಕ್ಷಣ ಅವರನ್ನು ಪ್ರಥಮತಃ ಅಕ್ಷರಸ್ಥರನ್ನಾಗಿ ಮಾಡಬೇಕು. ಜೊತೆಗೆ ಅವರು ಉದ್ಯೋಗನಿರತರಾಗಿ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಂಡು ಜೀವನದ ಮಟ್ಟವನ್ನು ಉತ್ತಮಪಡಿಸಿಕೊಳ್ಳುವಂತೆಯೂ ಮಾಡಬೇಕು. ಈ ಅಂಶಗಳನ್ನು ಪರಿಗಣಿಸಿದಾಗ ಗ್ರಾಮೀಣ ಶಿಕ್ಷಣವನ್ನು ಗ್ರಾಮಜೀವನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ, ಪಠ್ಯ ವಿಷಯ, ಬೋಧನ ವಿಧಾನ ಇವನ್ನೆಲ್ಲ ಅನುಗೊಳಿಸಿಕೊಂಡು ಪ್ರಥಮತಃ ಅವರನ್ನು ಅಕ್ಷರಸ್ಥರನ್ನಾಗಿ ಮಾಡುವುದಕ್ಕೂ ಅನಂತರ ಅವರು ತಮ್ಮ ಕಾರ್ಯಗಳನ್ನು ತಾವೇ ನಿರ್ದೇಶಿಸಿಕೊಂಡು ರಾಜ್ಯಾಂಗದಲ್ಲಿ ಉಲ್ಲೇಖಿಸಿರುವ ತಮ್ಮ ಹಕ್ಕು ಬಾಧ್ಯತೆಗಳನ್ನು ನಿರ್ವಹಿಸುವಂತೆ ತರಬೇತು ನೀಡುವುದಕ್ಕೂ ವ್ಯವಸ್ಥೆಗೊಂಡು ರಾಷ್ಟ್ರದ ಶಿಕ್ಷಣ ವ್ಯವಸ್ಥೆಯ ಒಂದು ವಿಶಿಷ್ಟ ಮುಖ ಎಂದು ನಿರ್ದೇಶಿಸಬೇಕಾಗುತ್ತದೆ.

	ಕೈಗಾರಿಕಾ ಪ್ರಗತಿಯ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಗ್ರಾಮೀಣ ಜೀವನ ಈಗ ಒಂದು ಸಾಂಸ್ಕøತಿಕ ಸಮಸ್ಯೆಯಾಗಿ ಉಳಿದಿಲ್ಲ. ಹಾಗೂ ಅಲ್ಲಿ ಈಚೆಗೆ ಬಳಕೆಗೆ ಬಂದಿರುವ ಸಾಮೂಹಿಕ ಪ್ರಸಾರ ಮಾಧ್ಯಮಗಳು, ತೀವ್ರವೇಗದ ವಾಹನ ಸೌಕರ್ಯ, ವ್ಯಾಪಕವಾದ ಸಂಪರ್ಕ ಸಾಧನ, ಉದ್ಯೋಗಾವಕಾಶಕ್ಕಾಗಿ ನಿರಂತರವಾಗಿ ಸಾಗುತ್ತಿರುವ ವಲಸೆ, ಆಹಾರಾದಿ ಪೂರೈಕೆಯಲ್ಲಿ ಏಕರೀತಿಯ ಜೀವನ ವಿಧಾನ-ಇವೇ ಮುಂತಾದ ಅಂಶಗಳ ಫಲವಾಗಿ ನಗರ ಜೀವನಕ್ಕೂ ಗ್ರಾಮ ಜೀವನಕ್ಕೂ ವ್ಯತ್ಯಾಸ ಕರಗಿ ಹೋಗುತ್ತಿದೆ. ಆದ್ದರಿಂದ ಗ್ರಾಮೀಣ ಶಿಕ್ಷಣದ ವೈಶಿಷ್ಟ್ಯವನ್ನು ಗುರುತಿಸುವುದು ಕಷ್ಟವಾಗುತ್ತಿದೆ. ನಿರಕ್ಷರತೆಯ ಪ್ರಮಾಣವನ್ನು ಆಧಾರಮಾಡಿ ಅದನ್ನು ನಿರ್ಧರಿಸಲು ಯತ್ನಿಸಿದರೂ ಅವೆರಡಕ್ಕೂ ವ್ಯತ್ಯಾಸ ಕಲ್ಪಿಸುವ ಪ್ರಮಾಣ ರೇಖೆಯನ್ನು ಯಾರು ಗುರುತಿಸಿಲ್ಲ. ಮೇಲಾಗಿ ಆ ಪ್ರಮಾಣ ಉತ್ತರ ಮತ್ತು ಪಶ್ಚಿಮ ಯೂರೋಪಿನಲ್ಲಿ 1-2% ಇದ್ದರೆ ಮಧ್ಯ ಏಷ್ಯದ ಕೆಲವು ದೇಶಗಳಲ್ಲಿ 80% ರಷ್ಟಿರುತ್ತದೆ. ಈ ಅಂತರ ಅದನ್ನು ಆಧಾರವಾಗಿ ಬಳಸುವ ಕಾರ್ಯವನ್ನು ಇನ್ನೂ ಜಟಿಲವಾಗಿಸಿದೆ.

	ಅಭಿವೃದ್ಧಿಮುಖ ರಾಷ್ಟ್ರಗಳಲ್ಲಿ ಗ್ರಾಮೀಣ ಶಿಕ್ಷಣ : ಮೇಲಿನ ವಿವರಣೆಯಿಂದ ಗ್ರಾಮೀಣ ಶಿಕ್ಷಣ, ಪ್ರಧಾನವಾಗಿ ಗ್ರಾಮೀಣ ಪ್ರದೇಶವನ್ನೊಳಗೊಂಡ, ಅಭಿವೃದ್ಧಿ ಮುಖದಲ್ಲಿರುವ ರಾಷ್ಟ್ರಗಳಲ್ಲಿ ಮಾತ್ರ ತೀವ್ರ ರೀತಿಯ ಸಮಸ್ಯೆಯಾಗಿದೆ. ಅಕ್ಷರ ಪ್ರಚಾರ ಅಲ್ಲಿನ ಶಿಕ್ಷಣದ ಮೂಲಗುರಿಯಾಗಿದ್ದರೂ ನಿತ್ಯ ಜೀವನಕ್ಕೆ ಉಪಯುಕ್ತವೆನಿಸುವ ಜ್ಞಾನ, ಅನುಭವ ಮತ್ತು ಕೌಶಲಾದಿಗಳನ್ನು ದೊರಕಿಸುವ ಕಡೆಯೂ ಗಮನ ಕೊಡಬೇಕಾಗುತ್ತದೆ. ಆ ಕಾರ್ಯವನ್ನು ಸಾಧಿಸಲು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವಿಧವಾದ ಶಾಲೆಗಳು ಅಸ್ತಿತ್ವಕ್ಕೆ ಬಂದಿವೆ. ಬೊಲಿವಿಯದಲ್ಲಿ ನ್ಯೂಕ್ಲಿಯಸುಗಳೂ ಫಿಲಿಪೀನ್ಸಿನಲ್ಲಿ ಸಮುದಾಯ ಶಾಲೆಗಳೂ ಇರಾನಿನಲ್ಲಿ ಬುಡಕಟ್ಟಿನ ಶಾಲೆಗಳೂ ಪೋರ್ಟರೀಕದಲ್ಲಿ ಎರಡನೆಯ ಘಟಕ ಗ್ರಾಮೀಣ ಶಾಲೆಗಳೂ ಎಥಿಯೋಪಿಯದಲ್ಲಿ ಅಲೆಮಾರು ಜನರ ಗೂಡಾರದ ಶಾಲೆಗಳೂ ಕಾರ್ಯವನ್ನು ನಿರ್ವಹಿಸುತ್ತಿವೆ. ಇವೆಲ್ಲ ಆಯಾ ದೇಶದ ಗ್ರಾಮಾಂತರ ಸಮಾಜಕ್ಕೂ ಸನ್ನಿವೇಶಕ್ಕೂ ಒಪ್ಪುವ ರೀತಿಯಲ್ಲಿ ಮೂಲ ಕೌಶಲಗಳನ್ನು ಪ್ರಸಾರ ಮಾಡುತ್ತವೆ.

	ಗ್ರಾಮೀಣ ಪಾಠ ಶಾಲೆಗಳು ಸಾಂಪ್ರದಾಯಿಕ ಶಿಕ್ಷಣವನ್ನು ನೀಡುತ್ತಿರುವ ದೇಶಗಳಲ್ಲಿ ಅಲ್ಲಿನ ಜನತೆಯ ಶಿಕ್ಷಣಕ್ಕಾಗಿ ಇತರ ಸಂಸ್ಥೆಗಳು ಹುಟ್ಟಿಕೊಂಡಿವೆ. ವಯಸ್ಕರ ಶಿಕ್ಷಣ ಸಮಿತಿ, ಅಕ್ಷರ ಪ್ರಚಾರ ಸಮಿತಿ, ಸಮುದಾಯಾಭಿವೃದ್ಧಿ ಕೇಂದ್ರ- ಮುಂತಾದವು ಅಂಥ ಸಂಸ್ಥೆಗಳು. ಇನ್ನು ಕೆಲವು ದೇಶಗಳಲ್ಲಿ ಸಾಂಪ್ರದಾಯಿಕ ಶಾಲೆಗಳು ವಯಸ್ಕರ ಶಿಕ್ಷಣಕ್ಕೂ ಅನುಕೂಲಿಸುವಂತೆ ಪಠ್ಯಕ್ರಮ ಮತ್ತು ಕಾರ್ಯಯೋಜನೆಗಳನ್ನು ಮಾರ್ಪಡಿಸಿಕೊಂಡಿವೆ. ಅಲ್ಲಿನ ಜನಸಾಮಾನ್ಯದ (ಸಮುದಾಯದ) ಜೀವನಕ್ಕೂ ಶಾಲೆಗಳೂ ಪರಸ್ಪರ ಸಹಕಾರ ಏರ್ಪಟ್ಟು ಸಮಾಜದ ಸೌಲಭ್ಯಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳುತ್ತಿವೆ. ಶಾಲೆಯ ಸಾಂಪ್ರದಾಯಿಕ ಶಿಕ್ಷಣವೊಂದರಿಂದಲೆ ಜನರು ಸಮಾಜ ಜೀವನದಲ್ಲಿ ನಾಯಕತನ ವಹಿಸುವ ಶಕ್ತಿ ಸಾಧಿಸಲಾರರು, ಸಮಾಜಾಭಿವೃದ್ಧಿ ಕಾರ್ಯ ಕೈಗೊಳ್ಳಲಾರರು. ಮೂಲ ಕೌಶಲಗಳ ಜೊತೆಗೆ ಅಭಿವೃದ್ಧಿಕಾರ್ಯಗಳಲ್ಲಿ ಅನುಭವ, ಅದಕ್ಕೆ ಹಿತಕರವಾದ ಹಿನ್ನೆಲೆಯಂಥ ಮಾನವೀಯ ಸಂಬಂಧ, ಸಮಾಜವನ್ನು ತನ್ನ ದೃಷ್ಟಿ ಪಥಕ್ಕೆ ಆಕರ್ಷಿಸುವ ಜಾಣ್ಮೆ ಮತ್ತು ಕೌಶಲ-ಇವೆಲ್ಲ ಅಗತ್ಯ. ಶಾಲೆಯೊಡನೆ ಅಲ್ಲಿನ ಜನತೆ ಸಹಕರಿಸಿದಾಗ ಈ ಸೌಲಭ್ಯಗಳು ಅವರಿಗೆ ಲಭಿಸುವುವಲ್ಲದೆ ಅಲ್ಲಿನ ಶಾಲಾ ಮಕ್ಕಳಿಗೂ ಆ ಫಲಗಳು ಲಭಿಸುತ್ತವೆ.

	ಏಷ್ಯದ ರಾಷ್ಟ್ರಗಳಲ್ಲಿ ವಿದ್ಯಾವಂತ ಯುವಜನರು ದೈಹಿಕ ದುಡಿಮೆಯ ಕಾರ್ಯಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವರೆಂದು ಹೇಳುವುದುಂಟು. ಆ ದೇಶಗಳು ಆರ್ಥಿಕವಾಗಿ ಹಿಂದುಳಿದಿರುವುದಕ್ಕೆ ಇದು ಒಂದು ಕಾರಣವೆಂದು ಹೇಳಲಾಗುತ್ತಿದೆ. ಅಲ್ಲದೆ ಆಧುನಿಕ ರೀತಿಯ ಶಾಲೆಗಳು ಊರಿನಲ್ಲಿ ಅಸ್ತಿತ್ವದಲ್ಲಿದ್ದರೂ ಅಲ್ಲಿನ ಜನ ಹಳೆಯ ಪದ್ಧತಿಯಲ್ಲೇ ವ್ಯವಸಾಯ ಮಾಡುತ್ತಿರುವರು. ಫಿಲಿಪೀನ್ಸಿನಲ್ಲಿ ಈ ಪರಿಸ್ಥಿತಿಯನ್ನು ಸುಧಾರಿಸಲು ಅಲ್ಲಿನ ರೈತರಿಗೆ ಆಧುನಿಕ ರೀತಿಯ ವ್ಯವಸಾಯಾದಿ ವಿಷಯಗಳನ್ನು ಬೋಧಿಸುವುದಕ್ಕೂ ಪ್ರದರ್ಶನಾದಿಗಳಿಂದ ಪ್ರಚಾರ ಮಾಡುವುದಕ್ಕೂ ಅನುಕೂಲಿಸುವಂತೆ ಶಾಲೆಗಳು ಮಾರ್ಪಟ್ಟಿವೆ. ಎಂದರೆ ಅಲ್ಲಿನ ಗ್ರಾಮೀಣ ಪ್ರಾಥಮಿಕ ಶಾಲೆಗಳು ಮಕ್ಕಳ ಶಿಕ್ಷಣದ ಜೊತೆಗೆ ಜನತೆಯ (ವಯಸ್ಕರ) ಶಿಕ್ಷಣದ ಹೊಣೆಯನ್ನೂ ಹೊತ್ತಿವೆ. ಪ್ರೌಢಶಾಲೆಗಳೂ ಆ ಕಾರ್ಯದಲ್ಲಿ ಭಾಗವಹಿಸುತ್ತಿವೆ. ಯಾವ ಹಂತದ ಶಾಲೆಯೇ ಆಗಲಿ ಮೂಲ ಕೌಶಲಾದಿ ಜ್ಞಾನದ ಜೊತೆಗೆ ಉಪಯುಕ್ತ ಜ್ಞಾನ, ಅನುಭವ, ಋಜುಮನೋಭಾವಗಳು, ಮುಂದೆ ಜೀವನದಲ್ಲಿ ಬಳಕೆಗೆ ಬರುವ ಕಸಬು ಕಲೆಗಳು ಮುಂತಾದವನ್ನೂ ಕಲಿಸುತ್ತವೆ. ಆರೋಗ್ಯ ಜೀವನಕ್ಕೆ ಅಗತ್ಯವೆನಿಸುವ ಆಧುನಿಕ ರೀತಿಯ ಕಕ್ಕಸುಗಳ ನಿರ್ಮಾಣ, ಶುದ್ಧ ನೀರಿನ ಬಳಕೆ, ಹಣ್ಣು ತರಕಾರಿಗಳ ಬೇಸಾಯ-ಇವೇ ಮುಂತಾದವುಗಳಲ್ಲೂ ಶಿಕ್ಷಣವೀಯುತ್ತವೆ. ಆ ಮೂಲಕ ಅಲ್ಲಿನ ಜನರ ಮೂಲ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ತಮ್ಮ ಕಾರ್ಯವನ್ನು ವಿಸ್ತರಿಸಿ ಕೊಂಡಿವೆ.

	ಕೆಲವು ವಿಶಿಷ್ಟ ಸಂಸ್ಥೆಗಳು ಗ್ರಾಮಾಂತರ ಪ್ರದೇಶದ ಜನತೆಯ ಶಿಕ್ಷಣದಲ್ಲಿ ಆಸಕ್ತಿ ವಹಿಸಿ ಪ್ರಚಾರಕಾರ್ಯ ಕೈಕೊಂಡಿವೆ. ಆಫ್ರಿಕದಲ್ಲಿ ಎನ್ಕೋರ ಸಮಾಜ ಕ್ಷೇಮಾಭಿವೃದ್ಧಿ ಸಂಸ್ಥೆ, ಭಾರತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮಾಜ ಕಲ್ಯಾಣ ಇಲಾಖೆಗಳು, ಹೈದರಾಬಾದಿನ ಹಿಮಾಯತ್ಸಾಗರದ ವಿಸ್ತರಣ ಕೇಂದ್ರ, ಶ್ರೀಲಂಕಾದ ಸರ್ಕಾರಿ ಮೂಲಭೂತ ಶಿಕ್ಷಣ ಯೋಜನೆ, ಯುನೆಸ್ಕೊದವರ ಮೆಕ್ಸಿಕೋದಲ್ಲಿನ ಕ್ರೆಫಾಲ್ ಕೇಂದ್ರ ಇತ್ಯಾದಿಗಳು ಆ ರೀತಿಯ ಪ್ರಚಾರ ಸಂಸ್ಥೆಗಳು. ಯೂರೋಪಿನ ಮತ್ತು ಉತ್ತರ ಅಮೆರಿಕದ ಕ್ರೈಸ್ತ ಮತ ಪ್ರಚಾರ ಸಂಸ್ಥೆಗಳೂ ಏಷ್ಯದ ಬೌದ್ಧ ಸಂಸ್ಥೆಗಳೂ ಈಜಿಪ್ಟಿನ ಮಹಮ್ಮದೀಯ ಸಂಸ್ಥೆಗಳೂ ಆ ಕಾರ್ಯ ಮಾಡುತ್ತಿವೆ. ಚೀನದಲ್ಲಿ ಜೇಮ್ಸ್ ಯೆನ್ ಆರಂಭಿಸಿದ ಸಾರ್ವಜನಿಕ ಶಿಕ್ಷಣ ಪ್ರಚಾರವೂ ಫಿಲಿಪೀನ್ಸಿನಲ್ಲಿ ಫ್ರಾಂಕ್ ಲಬಕ್ ಕೈಕೊಂಡ ಕಾರ್ಯವೂ ಪ್ರಪಂಚಾದ್ಯಂತ ಪರಿಣಾಮ ಬೀರಿವೆ ಹಾಗೂ ಗ್ರಾಮೀಣ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಿವೆ.

	ಪ್ವೆರ್ಟರೀಕ, ಈಜಿಪ್ಟ್, ಕೊರಿಯ, ಫಿಲಿಪೀನ್ಸ್ ದೇಶಗಳಲ್ಲಿ ಈಚೆಗೆ ಪ್ರಚಾರಕ್ಕೆ ಬಂದಿರುವ ಗ್ರಾಮೀಣ ಶಾಲಾ ಸಮುದಾಯ ಕೇಂದ್ರಗಳು ಈ ಕ್ಷೇತ್ರದಲ್ಲಾಗಿರುವ ಪ್ರಮುಖ ಬೆಳವಣಿಗೆಯೆಂದು ಹಲವರು ಪರಿಗಣಿಸುವರು. ಮಕ್ಕಳ ಮತ್ತು ದೊಡ್ಡವರ ಶಿಕ್ಷಣವನ್ನು ವಹಿಸಿಕೊಂಡಿರುವ ಈ ಶಾಲಾ ಕೇಂದ್ರಗಳು ಅಲ್ಲಿನ ಜನತೆಯ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಕಡೆ ಗಮನವಿತ್ತು ಅವರ ಜೀವನವನ್ನು ಉತ್ತಮಪಡಿಸುವಂತೆ ಶಿಕ್ಷಣವೀಯುತ್ತಿವೆ. ಆಧುನಿಕ ರೀತಿಯ ಬೇಸಾಯ ವಿಧಾನಗಳು, ನೈರ್ಮಲ್ಯ ವಿಧಾನಗಳು, ಆರೋಗ್ಯಕರವಾದ ಅಭ್ಯಾಸಗಳು ಕುಟುಂಬ ಮತ್ತು ಸಮಾಜ ಜೀವನದಲ್ಲಿ ಯಶಸ್ವಿಯಾಗಿ ಬಾಳಲು ನೆರವಾಗುವ ಕೌಶಲ ಮತ್ತು ಮನೋಭಾವಗಳು ಇತ್ಯಾದಿಗಳನ್ನು ಅಕ್ಷರ ಪ್ರಚಾರದ ಜೊತೆಗೆ ಬೋಧಿಸುತ್ತಿವೆ.

	ಕೈಗಾರಿಕಾ ರಾಷ್ಟ್ರಗಳಲ್ಲಿ ಗ್ರಾಮೀಣ ಶಿಕ್ಷಣ : ಕೈಗಾರಿಕೆಯಲ್ಲಿ ತೀರ ಮುಂದುವರಿದಿರುವ ಅಮೆರಿಕದ ಸಂಯುಕ್ತ ಸಂಸ್ಥಾನಗಳು, ಬ್ರಿಟನ್, ಜರ್ಮನಿ, ಜಪಾನ್ ಮುಂತಾದ ದೇಶಗಳಲ್ಲೂ ಗ್ರಾಮೀಣ ಶಿಕ್ಷಣದ ಸಮಸ್ಯೆ ಇದ್ದೇ ಇದೆ. ಅಲ್ಲಿನ ನಗರಗಳಿಗೂ ಗ್ರಾಮಗಳಿಗೂ ಅಷ್ಟಾಗಿ ವ್ಯತ್ಯಾಸವಿಲ್ಲದ ಪ್ರಯುಕ್ತ ಅಲ್ಲಿನ ಶಾಲೆಗಳಲ್ಲೂ ವ್ಯತ್ಯಾಸ ಕಲ್ಪಿಸಿಲ್ಲ. ಆದರೆ ಶಾಲೆಗಳ ಸ್ಥಾಪನೆ, ಆಡಳಿತ, ಹಣಕಾಸು ಮುಂತಾದವಕ್ಕೆ ಸಂಬಂಧಿಸಿದ ವ್ಯತ್ಯಾಸಗಳು ಕಂಡುಬರುತ್ತವೆ. ಪಠ್ಯಕ್ರಮದಲ್ಲಿ ಸರ್ಕಾರ ಅನುಮತಿ ನೀಡಿರುವ ಅಥವಾ ಅಂಗೀಕರಿಸಿರುವ ಆದರೆ ಗ್ರಾಮೀಣ ಜೀವನಕ್ಕೆ ಮುಖ್ಯವಾಗಿ ನೆರವಾಗಬಲ್ಲ ತೋಟಗಾರಿಕೆ, ಬೇಸಾಯ, ಗೃಹ ಕೈಗಾರಿಕೆ, ಗೃಹ ಕಾರ್ಯನಿರ್ವಹಣೆ ಮುಂತಾದ ವಿಷಯಗಳ ಬೋಧನೆಗೆ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಅಧ್ಯಾಪಕರ ನೇಮಕವೇ ಮುಂತಾದ ಆಡಳಿತಾಂಶಗಳಲ್ಲಿ ಸ್ವಾತಂತ್ರ್ಯವಿದ್ದರೂ ಶೈಕ್ಷಣಿಕ ಅಂಶಗಳಲ್ಲಿ ಅಷ್ಟಾಗಿ ಸ್ವಾತಂತ್ರಯವಿರುವುದಿಲ್ಲ. ಶಾಲೆಯ ವೆಚ್ಚದಲ್ಲಿ 70%ರಿಂದ 80%ರ ವರೆಗೂ ಸರ್ಕಾರದಿಂದ ಸಹಾಯ ಧನ ಪಡೆಯುವ ಖಾಸಗಿ ಅಥವಾ ಸ್ಥಳೀಯ ಸರ್ಕಾರದ ಶಾಲೆಗಳೇ ಅಲ್ಲಿ ಹೆಚ್ಚು. ಅಲ್ಲಿನ ಎಲ್ಲ ಮಟ್ಟದ ಶಿಕ್ಷಣ ಸಂಸ್ಥೆಗಳಲ್ಲೂ ಶಿಕ್ಷಣ ಅಂತಿಮ ಸ್ವರೂಪದ್ದಾಗಿರುತ್ತದೆ. ಎಲ್ಲೋ ಅಪರೂಪವಾಗಿರುವ ಕೆಲವು ಪ್ರೌಢಶಾಲೆಗಳಲ್ಲಿ ಮಾತ್ರ ಕಾಲೇಜಿಗೆ ಸಿದ್ಧತೆ ಮಾಡಿಸುತ್ತಾರೆ.

	ಸಣ್ಣ ಪುಟ್ಟ ಆಡಳಿತ ಸಂಸ್ಥೆಗಳನ್ನು ಕಡಿಮೆ ಮಾಡುವ ಪ್ರವೃತ್ತಿ ವ್ಯಕ್ತಪಡುತ್ತಿರುವ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಆಡಳಿತ, ಬೋಧನೆ, ಸರಬರಾಜು ಮುಂತಾದ ಅಂಶಗಳು ಕೇಂದ್ರೀಕೃತವಾಗುತ್ತಿವೆ. ಈ ಪ್ರವೃತ್ತಿಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ವ್ಯವಸ್ಥೆಗೊಂಡಿರುವ ವಾಹನ ಸೌಕರ್ಯ, ಸಾರಿಗೆ ಸಂಪರ್ಕ ಮುಂತಾದವು ಸಹಾಯಕವಾಗಿವೆ. ಅಲ್ಲಿನ ಶಾಲೆಗಳಲ್ಲಿ ಮಕ್ಕಳ ಸೇರ್ಪಡೆ ಮತ್ತು ಹಾಜರಾತಿ ನಗರದ ಶಾಲೆಗಳಷ್ಟು ಸಮರ್ಪಕವಾಗಿಲ್ಲ. ಕಟ್ಟಡಗಳು ಅಲ್ಲಿನವಕ್ಕೆ ಸರಿಗಟ್ಟಲಾರವು. ಅಧ್ಯಾಪಕರ ಸಂಬಳ ಸಾರಿಗೆಗಳೂ ಕಡಿಮೆ. 1914ರಿಂದ ಆರಂಭವಾಗಿರುವ ಕೃಷಿ ವಿಸ್ತರಣ ಸೇವಾ ವ್ಯವಸ್ಥೆ ಅಲ್ಲಿನ ರೈತರಿಗೆ ಒಳ್ಳೆಯ ಶಿಕ್ಷಣವೀಯುತ್ತಿದೆ. `ಫೋರ್ ಎಚ್ ' ಕ್ಲಬ್ ದೇಶಾದ್ಯಂತ ವ್ಯವಸ್ಥೆಗೊಳಿಸಿರುವ ತನ್ನ ಶಾಖೆಗಳು ಗ್ರಾಮೀಣ ಬಾಲಕ ಬಾಲಕಿಯರಿಗೆ ಪೌರಜೀವನ, ಗೃಹ ಕಾರ್ಯನಿರ್ವಹಣೆ, ಕುಟುಂಬ ಜೀವನ ಮತ್ತು ಬೇಸಾಯಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿಯಾಗಿ ಶಿಕ್ಷಣವೀಯುತ್ತವೆ. ಕ್ರೈೈಸ್ತಮತ ಪೀಠಗಳೂ ಅಲ್ಲಿನ ಜನತೆಯ ಜೀವನವನ್ನು ಉತ್ತಮ ಪಡಿಸಲು ಶಿಕ್ಷಣವೀಯುತ್ತವೆ. ರೈತರು ತಮ್ಮವೇ ಆದ ಶಿಕ್ಷಣ ಸಂಘಗಳನ್ನು ಏರ್ಪಡಿಸಿಕೊಂಡು ಅವುಗಳ ಮೂಲಕವೂ ತಮಗೆ ಬೇಕಾದ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿಕೊಳ್ಳುತ್ತಾರೆ.

	ಇಂಗ್ಲೆಂಡು ಮತ್ತು ವೇಲ್ಸಿನ ಶಾಲೆಗಳಲ್ಲಿ ಗ್ರಾಮೀಣ ಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಪ್ರಾಧಾನ್ಯವುಂಟು. ವೆಲ್ಷ್ ಭಾಷೆಯನ್ನು ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಾರೆ. ಗ್ರಾಮಾಂತರ ಪ್ರದೇಶಗಳ ಹವೆ, ಸಸ್ಯವರ್ಗ ಇವುಗಳ ಪರಿಶೀಲನೆಗೆ ಅವಕಾಶ ಕಲ್ಪಿಸಿಕೊಂಡಿವೆ. ಪ್ರೌಢಶಾಲೆಗಳಲ್ಲಿ ವೃತ್ತಿಶಿಕ್ಷಣಕ್ಕೆ ಅವಕಾಶವುಂಟು. ಕಾಲೇಜಿಗೆ ಸಿದ್ಧತೆ ನೀಡುವ ಗ್ರಾಮರ್ ಶಾಲೆಗಳು ಅಲ್ಲಿ ಕಡಿಮೆ. ಮರ ಗೆಲಸ, ಇಟ್ಟಿಗೆ ಕೆಲಸ, ಲೋಹದ ಕೆಲಸ, ವ್ಯವಸಾಯದ ಕೆಲಸ-ಇವನ್ನು ಅಲ್ಲಿನ ಪ್ರೌಢಶಾಲೆಗಳಲ್ಲಿ ಕಲಿಸುತ್ತಾರೆ. ದೂರದಿಂದ ಬರುವ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರವನ್ನು ಒದಗಿಸುವರಲ್ಲದೆ ಹೋಗಿಬರಲು ವಾಹನ ಸೌಕರ್ಯವನ್ನು ಏರ್ಪಡಿಸಿರುತ್ತಾರೆ.

	ಮುಂದುವರಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಗ್ರಾಮಾಂತರ ಶಿಕ್ಷಣಕ್ಕೆ ಬೇಕಾದ ತಾಂತ್ರಿಕ ಮತ್ತು ಆರ್ಥಿಕ ನೆರವನ್ನು ನೀಡುವುದರ ಮೂಲಕ ಜನಜನಾಂಗಗಳಲ್ಲಿರುವ ಅಂತರವನ್ನು ಕಡಿಮೆ ಮಾಡಲು ಯತ್ನಿಸುತ್ತಿವೆ. ಪ್ರಪಂಚದ ಬಹು ಪಾಲು ಜನತೆ ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮಾಂತರ ಪ್ರದೇಶಗಳಲ್ಲಿರುವುದರಿಂದ ಗ್ರಾಮೀಣ ಶಿಕ್ಷಣದ ಸಮಸ್ಯೆ ಪ್ರಪಂಚದ ಪ್ರಮುಖ ಶಿಕ್ಷಣ ಸಮಸ್ಯೆಯಾಗಿದೆ.

	ಭಾರತದಲ್ಲಿ ಗ್ರಾಮೀಣ ಶಿಕ್ಷಣ : ಕಾಲು ಶತಮಾನದಿಂದ ವಿವಿಧ ಉದ್ಯೋಗಗಳನ್ನು ಅಧಿಕ ಸಂಖ್ಯೆಯಲ್ಲಿ ಕಲ್ಪಿಸುತ್ತಿದ್ದರೂ ಭಾರತ ಇಂದಿಗೂ ಮುಖ್ಯವಾಗಿ ವ್ಯವಸಾಯದ ದೇಶವಾಗಿದ್ದು, ಜನತೆಯ ಮುಕ್ಕಾಲು ಪಾಲು ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತ ವ್ಯವಸಾಯದಿಂದ ಜೀವಿಸುತ್ತಿದೆ. ದೇಶದಲ್ಲಿ ಅಕ್ಷರಸ್ಥರ ಸರಾಸರಿ ಸಂಖ್ಯೆ 29.34% ಗಂಡಸರಲ್ಲಿ 39.5%ರಷ್ಟೂ ಹೆಂಗಸರಲ್ಲಿ 18.4% ರಷ್ಟೂ ಅಕ್ಷರತೆ ಇರುತ್ತದೆ. ಹಾಗೂ ನಗರಗಳ ಮಹಿಳೆಯರಲ್ಲಿ 42% ರಷ್ಟೂ ಗ್ರಾಮಾಂತರ ಪ್ರದೇಶದ ಮಹಿಳೆಯರಲ್ಲಿ ಕೇವಲ 3%ರಷ್ಟೂ ಇದೆ. ಎಂದರೆ ಗ್ರಾಮಾಂತರ ಪ್ರದೇಶದಲ್ಲಿ ಅಕ್ಷರಸ್ಥರ ಪ್ರಮಾಣ ಅಧಿಕವಾಗಿದೆ ; ಮಹಿಳೆಯರಲ್ಲಂತೂ ಅಕ್ಷರಸ್ಥರೇ ಅಪರೂಪ. ಈಚೆಗೆ ಪ್ರಾಥಮಿಕ ಶಿಕ್ಷಣವನ್ನು 6 ರಿಂದ 11ರ ವಯೋಮಾನದ ಮಕ್ಕಳಿಗೆ ಕಡ್ಡಾಯ ಮಾಡಿದ್ದರ ಫಲವಾಗಿ ಅಕ್ಷರಸ್ಥರ ಸೇಕಡಾ ಪ್ರಮಾಣ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿದೆ. ಜೊತೆಗೆ ವಯಸ್ಕರ ಶಿಕ್ಷಣ ಪ್ರಚಾರ, ಸಮಾಜಾಭಿವೃದ್ಧಿ ಕೇಂದ್ರಗಳಲ್ಲಿ ಅಕ್ಷರಪ್ರಚಾರ ಇವುಗಳ ಫಲವಾಗಿ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ. ಆದರೆ ಜನಸಂಖ್ಯೆ ತೀವ್ರವೇಗದಲ್ಲಿ ಹೆಚ್ಚುತ್ತಿರುವುದರ ಫಲವಾಗಿ ಅಕ್ಷರಸ್ಥರ ಸಂಖ್ಯೆ ಹೆಚ್ಚಿದರೂ ಅವರ ಸೇಕಡಾ ಪ್ರಮಾಣ ಮಾತ್ರ ಅಷ್ಟಾಗಿ ಹೆಚ್ಚುತ್ತಿಲ್ಲ. ಪ್ರಾಥಮಿಕ ಶಾಲೆಗೆ ಆ ವಯೋಮಾನದ ಮಕ್ಕಳಲ್ಲಿ 59%ರಷ್ಟೂ ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಯೋಮಾನದ ಮಕ್ಕಳಲ್ಲಿ 20%ರಷ್ಟೂ ಉನ್ನತ ಪ್ರೌಢಶಾಲೆಗೆ ಆ ವಯೋಮಾನದ ಮಕ್ಕಳಲ್ಲಿ ಕೇವಲ 10%ರಷ್ಟೂ ಸೇರಿರುತ್ತಾರೆ. ಪರಿಗಣಿತ ಕೋಮಿನವರಲ್ಲೂ ಬುಡಕಟ್ಟಿನವರಲ್ಲೂ ಈ ಪ್ರಮಾಣ ತೀರ ಕಡಿಮೆಯಾಗಿದೆ. (1%ಮಾತ್ರ). ಪೋಷಕರ ಬಡತನ, ಅಜ್ಞಾನ ನಿರಾಸಕ್ತಿ, ಮಕ್ಕಳ ದುಡಿಮೆಯನ್ನು ಅವಲಂಬಿಸಿರುವ ಅವರ ಕಸಬು, ಮೂಢ ಸಂಪ್ರದಾಯಗಳು ಇವೆಲ್ಲ ಕಾರಣಗಳಿಂದ ಮಕ್ಕಳು ಶಾಲೆಗೆ ಸೇರುವುದಾಗಲಿ, ಸೇರಿ ಹಾಜರಾಗುವುದಾಗಲಿ ತೃಪ್ತಿಕರವಾಗಿ ಉತ್ತಮಗೊಂಡಿಲ್ಲ. ಶಾಲೆಗೆ ಸೇರದ ಹಾಗೂ ಹಾಜರಾಗದ ಮಕ್ಕಳ ಪೋಷಕರು ಕಾನೂನು ರೀತ್ಯ ಶಿಕ್ಷಾರ್ಹರೆನಿಸುವಂತಿದ್ದರೂ ಹಲವಾರು ಕಾರಣಗಳಿಂದ ಅದನ್ನು ಅಷ್ಟಾಗಿ ಆಚರಣೆಗೆ ತರುತ್ತಿಲ್ಲ. ಅಲ್ಲದೆ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಕಟ್ಟಡದ ಅಭಾವ, ಅಧ್ಯಾಪಕರ ಕೊರತೆ, ಉಪಕರಣಾದಿಗಳಿಲ್ಲದಿರುವುದು, ನಿರುತ್ಸಾಹ ರೀತಿಯ ಪಠ್ಯವಸ್ತು, ಬೋಧನ ವಿಧಾನ ಮತ್ತು ಕಾರ್ಯಕ್ರಮ-ಇವುಗಳೂ ಪರಿಸ್ಥಿತಿಗೆ ಕಾರಣವೆನಿಸಿವೆ. ಇಡೀ ದೇಶದ 352 ಜಿಲ್ಲೆಗಳಲ್ಲಿ ಕೇವಲ 32 ಜಿಲ್ಲೆಗಳಲ್ಲಿ ಮಾತ್ರ ಅಕ್ಷರತೆ 25% ರಷ್ಟಿದೆ. ಆ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ನಗರದ ಜನತೆ ಸೇರಿರುವುದೇ ಇದಕ್ಕೆ ಕಾರಣವೆನ್ನಬಹುದು. ಮಿಕ್ಕ ಜಿಲ್ಲೆಗಳಲ್ಲಿ ಆ ಪ್ರಮಾಣ ತೀರ ಕಡಿಮೆಯಾಗಿದೆ. ಒರಿಸ್ಸ, ಮಧ್ಯಪ್ರದೇಶ, ಆಂಧ್ರ, ಮೈಸೂರಿನ ಕೆಲವು ಜಿಲ್ಲೆಗಳು ಇದಕ್ಕೆ ಉದಾಹರಣೆಯೆನ್ನಬಹುದು. ಗ್ರಾಮೀಣ ಶಿಕ್ಷಣವೆಂದರೆ ಅಲ್ಲಿನ ಮಹಿಳೆಯರಲ್ಲಿ ಪ್ರಥಮತಃ ಅಕ್ಷರ ಪ್ರಚಾರವೇ ಆಗುತ್ತದೆ. ಈ ದೃಷ್ಟಿಯಲ್ಲಿ ನೋಡಿದರೆ, ಗ್ರಾಮಗಳಲ್ಲಿ ಮಹಿಳೆಯರಲ್ಲಿ ಅಕ್ಷರ ಪ್ರಚಾರ ಹೆಚ್ಚಿದರೆ ಭಾರತದಲ್ಲಿ ಅನಕ್ಷರಸ್ಥರ ಪ್ರಮಾಣ ಕಡಿಮೆಯಾಗುತ್ತದೆ.

	1961 - 62ರಿಂದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಶಾಲೆಗಳಿಗೆ ಮಕ್ಕಳ ಸೇರ್ಪಡೆ ಗಣನೀಯವಾಗಿ ಹೆಚ್ಚುತ್ತಿದೆ. ನಾಲ್ಕನೆಯ ಯೋಜನೆಯ ಅಂತ್ಯದ ವೇಳೆಗೆ 6 ರಿಂದ 11 ರ ವಯೋಮಾನದ ಮಕ್ಕಳಲ್ಲಿ 88% ರಷ್ಟನ್ನೂ ಐದನೆಯ ಯೋಜನೆಯ ಕೊನೆಯ ವೇಳೆಗೆ ಅವರಲ್ಲಿ 100% ರಷ್ಟನ್ನೂ 11 ರಿಂದ 14ರ ವಯೋಮಾನದ ಮಕ್ಕಳಲ್ಲಿ 82% ರಷ್ಟನ್ನೂ ಶಾಲೆಗೆ ಸೇರಿಸುವ ಯತ್ನ ನಡೆಯುತ್ತಿದೆ. ಸಾಮಾನ್ಯ ಶಾಲೆಗಳ ಜೊತೆಗೆ ವಯಸ್ಕರಲ್ಲಿ ಅಕ್ಷರ ಪ್ರಚಾರವನ್ನು ಮಡುತ್ತಿರುವ ವಯಸ್ಕರ ಶಿಕ್ಷಣ ಸಮಿತಿ, ಸಮಾಜಾಭಿವೃದ್ಧಿ ಯೋಜನೆಯ ಘಟಕಗಳು ಇವೆಲ್ಲ ಅನಕ್ಷರಸ್ಥರ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತಿವೆ. ವಿಶ್ವವಿದ್ಯಾಲಯಗಳ ಪ್ರಕಟಣೆ ಮತ್ತು ಪ್ರಚಾರೋಪನ್ಯಾಸ ವಿಭಾಗವೂ ಸರ್ಕಾರದ ವ್ಯವಸಾಯ, ಆರೋಗ್ಯ ಮುಂತಾದ ಶಾಖೆಗಳೂ ಸಮಾಜ ಕಲ್ಯಾಣ ಮಂಡಳಿಯೂ ಅಲ್ಲಿನ ವಯಸ್ಕರಲ್ಲಿ ಶಿಕ್ಷಣ ಪ್ರಸಾರ ಕಾರ್ಯವನ್ನು ಕೈಗೊಂಡಿವೆ. ಈಚೆಗೆ ಅಸ್ತಿತ್ವಕ್ಕೆ ಬಂದಿರುವ ಕೃಷಿ ವಿದ್ಯಾಲಯಗಳು ದೇಶಾದ್ಯಂತ ಬೇಸಾಯಕ್ಕೆ ಸಂಬಂಧಿಸಿದ ವಿಸ್ತರಣ ಸೇವಾ ಕಾರ್ಯವನ್ನು ನಿರ್ವಹಿಸುತ್ತಿವೆ. ಇವುಗಳ ಜೊತೆಗೆ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಧಾರ್ಮಿಕ ಮತ್ತು ಸಾಂಸ್ಕøತಿಕ ಸಂಘ ಸಂಸ್ಥೆಗಳು ಜನತೆಯ ಜೀವನವನ್ನು ಹಸನು ಮಾಡಲು ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಯಸ್ಕರ ಶಿಕ್ಷಣವನ್ನು ಸಾಧಿಸುತ್ತಿವೆ.

	ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು ನಗರದವುಗಳಿಗಿಂತ ಭಿನ್ನವಾಗಿಲ್ಲ. ಪ್ರಾಥಮಿಕ ಶಿಕ್ಷಣ 6 - 7 ವರ್ಷಗಳ ಕಾಲಾವಧಿಯಾದಾಗಿದ್ದು ಮೂಲ ಕೌಶಲಗಳನ್ನು ಬೋಧಿಸತಕ್ಕವಾಗಿವೆಯೇ ಹೊರತು ಅಂತಿಮ ಸ್ವರೂಪದ ಶಿಕ್ಷಣವನ್ನು ನೀಡತಕ್ಕವಾಗಿಲ್ಲ. ಪ್ರೌಢಶಾಲೆಗಳ ಸಂಖ್ಯೆ ಅಲ್ಲಿ ಇನ್ನೂ ಹೆಚ್ಚಬೇಕಾಗಿದೆ. ಗ್ರಾಮೀಣ ಶಿಕ್ಷಣವನ್ನು ಪರಿಣಾಮಕಾರಿಯಾಗಿಸಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ತಯಾರಿಸಿದ್ದರೂ ಅವು ಇನ್ನೂ ಯಶಸ್ವಿಯಾಗಬೇಕಾಗಿವೆ. 1966 ರಲ್ಲಿ ನೇಮಕವಾಗಿದ್ದ ಕೊಠಾರಿ ಶಿಕ್ಷಣ ಆಯೋಗ ಗ್ರಾಮೀಣ ಶಿಕ್ಷಣವನ್ನು ಪ್ರತ್ಯೇಕವಾಗಿ ಪರಿಶೀಲಿಸಿಲ್ಲ. ಆದರೆ ಅಲ್ಲಿನ ಶಾಲೆಗಳಲ್ಲಿ ವ್ಯವಸಾಯವನ್ನು ಬೋಧಿಸುವ ಬಗ್ಗೆ ಟೀಕಿಸುತ್ತ ಮಕ್ಕಳ ಆ ವಯಸ್ಸು ವೃತ್ತಿ ಶಿಕ್ಷಣಕ್ಕೆ ಅನುಕೂಲವಲ್ಲವೆಂದೂ ಅದರ ಬದಲು ವಿಜ್ಞಾನ ಮತ್ತು ಗಣಿತವನ್ನು ಬೋಧಿಸುವುದರಿಂದ ಮುಂದೆ ಆ ರೀತಿಯ ಶಿಕ್ಷಣಕ್ಕೆ ಸಹಾಯವಾಗುವುದೆಂದೂ ಸಲಹೆ ಮಾಡಿದೆ. ಬಹುಶಃ ಇಂಗ್ಲೆಂಡಿನ ಟೆಕ್ನಿಕಲ್ ಸೆಕೆಂಡರಿ ಶಾಲೆಗಳಂಥ ಪ್ರೌಢಶಾಲೆಗಳನ್ನು ಆರಂಭಿಸಿ, ಅಲ್ಲಿ ಗ್ರಾಮ ಜೀವನಕ್ಕೂ ವ್ಯವಸಾಯಕ್ಕೂ ನೆರವಾಗತಕ್ಕ ಮರಗೆಲಸ, ಲೋಹದ ಕೆಲಸ, ಕಟ್ಟಡದ ಕೆಲಸ, ಗೃಹ ಕಾರ್ಯನಿರ್ವಹಣೆ ಮುಂತಾದ ವೃತ್ತಿಪರಶಿಕ್ಷಣದ ಬೋಧನೆಗೆ ವ್ಯವಸ್ಥೆಮಾಡಿ, ಅದನ್ನು ಬಹು ಮಟ್ಟಿಗೆ ಅಂತಿಮ ಸ್ವರೂಪದ ಶಿಕ್ಷಣವನ್ನಾಗಿ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಬಹುದು.

	ಗ್ರಾಮೀಣ ಉನ್ನತ ಶಿಕ್ಷಣ : ಗ್ರಾಮಾಂತರ ಪ್ರದೇಶದ ಯುವಕ ಯುವತಿಯರಿಗೆ ಪ್ರೌಢ ಅಥವಾ ಪ್ರಿಯೂನಿವರ್ಸಿಟಿ ಶಿಕ್ಷಣದ ಅನಂತರ ಅಲ್ಲಿನ ಜೀವನಕ್ಕೆ ಅನುಕೂಲಿಸುವಂಥ ಶಿಕ್ಷಣ ಕಾರ್ಯಕ್ರಮಗಳನ್ನೇ ಪ್ರಧಾನವಾಗಿ ಏರ್ಪಡಿಸಿಕೊಂಡಿರುವ ವಿಶಿಷ್ಟ ರೀತಿಯ ಒಂದು ವ್ಯವಸ್ಥೆ. ಸಾಂಪ್ರದಾಯಿಕ ವಿಶ್ವವಿದ್ಯಾಲಯದ ಶಿಕ್ಷಣಕ್ಕಿಂತ ಭಿನ್ನವಾಗಿರುವ ಈ ಶಿಕ್ಷಣ ತನ್ನದೇ ಆದ ಉದ್ದೇಶ, ಗೊತ್ತುಗುರಿಗಳು, ಕರ್ತವ್ಯ, ಆಡಳಿತ ವ್ಯವಸ್ತೆ, ವಿದ್ಯಾಲಯಗಳು, ಕಾರ್ಯಕ್ರಮಗಳು ಮುಂತಾದವನ್ನು ರೂಪಿಸಿಕೊಂಡಿರುತ್ತದೆ. ಗ್ರಾಮಾಂತರ ಪ್ರದೇಶದ ಯುವ ಜನರು ನಗರದ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಪಡೆದು ನಗರ ಜೀವನಕ್ಕೇ ಹೊಂದಿಕೊಂಡು ಅಲ್ಲೆ ನೆಲೆಸುವುದರಿಂದ ಗ್ರಾಮ ಜೀವನದ ಪ್ರತಿಭೆ ಮತ್ತು ಜನಸಾಮಥ್ರ್ಯದಲ್ಲಿ ತಲೆದೋರುವ ಕೊರತೆಯನ್ನು (ಸೋರುವಿಕೆ) ತಪ್ಪಿಸಿ, ಗ್ರಾಮ ಜೀವನದಲ್ಲಿ ಆಸಕ್ತಿ ಮೂಡಿಸಿ ಅಲ್ಲಿನ ಯುವಕರು ಅಲ್ಲೇ ನೆಲೆಸಿ ಅಲ್ಲಿನ ಜೀವನವನ್ನು ಸಮೃದ್ಧಗೊಳಿಸಲು ನೆರವಾಗುವಂಥ ಕಾರ್ಯಕ್ರಮಗಳನ್ನು ರೂಪಿಸಿಕೊಂಡು, ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈಚೆಗೆ ಈ ವಿಶಿಷ್ಟ ಶಿಕ್ಷಣ ಅಸ್ತಿತ್ವಕ್ಕೆ ಬರುತ್ತಿದೆ.

	ವ್ಯವಸಾಯವೇ ಮುಖ್ಯ ಕಸಬಾಗುಳ್ಳ ರಾಷ್ಟ್ರಗಳಲ್ಲಿ ಜನತೆಯ ಬಹು ಭಾಗ ದೇಶಾದ್ಯಂತ ಹರಡಿರುವ ಸಣ್ಣ ಪುಟ್ಟ ಗ್ರಾಮಗಳಲ್ಲಿ ನೆಲೆಸಿರುತ್ತದೆ. ಪ್ರಾಥಮಿಕ ಶಿಕ್ಷಣದ ಸೌಲಭ್ಯ ಅಲ್ಲಿಗೆ ಪೂರ್ಣವಾಗಿ ವಿಸ್ತರಿಸಿದೆಯೆಂದು ಒಪ್ಪಿದರೂ ಪ್ರೌಢ ಮತ್ತು ಉನ್ನತ ಶಿಕ್ಷಣದ ಸೌಲಭ್ಯಗಳು ಬಹು ಮಟ್ಟಿಗೆ ನಗರಗಳಲ್ಲಿ ವ್ಯವಸ್ಥೆಗೊಂಡಿವೆ. ಗ್ರಾಮಾಂತರ ಪ್ರದೇಶಗಳವರು ಅಲ್ಲಿಗೆ ಹೋಗಿ ಶಿಕ್ಷಣ ಪಡೆಯುವುದೆಂದರೆ ಅದು ಕೇವಲ ಕೆಲವು ಶ್ರೀಮಂತರಿಗೆ ಮಾತ್ರ ಸಾಧ್ಯವೆನಿಸಿದ್ದು ಮಿಕ್ಕ ಬಹು ಪಾಲು ಜನತೆಗೆ ಎಟುಕದಾಗಿದೆ. ಈಚೆಗೆ ಪ್ರೌಢ ಮತ್ತು ಪ್ರಿಯೂನಿವರ್ಸಿಟಿ ಮಟ್ಟದ ಶಿಕ್ಷಣವನ್ನು ಗ್ರಾಮಗಳಲ್ಲೂ ಆರಂಭಿಸುವ ಯತ್ನ ನಡೆದಿದ್ದರೂ ಅದು ಅಷ್ಟು ವ್ಯಾಪಕವಾಗಿ ಸಾಗಿಲ್ಲ. ನಗರಗಳಿಗೆ ಬಂದು ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆದು ಅಲ್ಲಿನ ಜೀವನಕ್ಕೆ ಹೊಂದಿಕೊಳ್ಳುವವರಿಗೆ ಗ್ರಾಮ ಜೀವನ ಆಕರ್ಷಕವಾಗಿರದ ಪ್ರಯುಕ್ತ ನಗರಜೀವನಕ್ಕೆ ಮನಸೋತು ಅಲ್ಲೇ ನೆಲೆಸುವ ಹವ್ಯಾಸ ಹೆಚ್ಚುತ್ತಿದೆ. ಅಲ್ಲದೆ ಸಾಂಪ್ರದಾಯಿಕ ರೀತಿಯ ಉನ್ನತ ಶಿಕ್ಷಣ ಗ್ರಾಮ ಜೀವನವನ್ನು ಸಮೃದ್ಧಗೊಳಿಸುವ ಉದ್ದೇಶದಿಂದ ಏರ್ಪಟ್ಟಿಲ್ಲ. ಅಂಥ ಶಿಕ್ಷಣವನ್ನು ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಿದರೂ ಅಲ್ಲಿನ ಜೀವನವನ್ನು ಆಕರ್ಷಕವಾಗಿಸಲಾರದೆಂಬ ಅಂಶವನ್ನು ಅರಿತಂತೆ, ಅಲ್ಲಿನ ಜೀವನವನ್ನು ಸಮೃದ್ಧಗೊಳಿಸಿ, ಶಿಕ್ಷಣ ಪಡೆದ ಯುವಕ ಯುವತಿಯರು ಅಲ್ಲೇ ಉದ್ಯೋಗನಿರತರಾಗುವ ಅವಕಾಶವನ್ನು ಕಲ್ಪಿಸಬಲ್ಲ ವಿಶಿಷ್ಟ ರೀತಿಯ ಉನ್ನತ ಶಿಕ್ಷಣದ ವ್ಯವಸ್ಥೆಯನ್ನು ರೂಪಿಸುವ ಕಾರ್ಯದಲ್ಲಿ ಮುಖ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ನಿರತವಾಗಿರುವುದು ಕಂಡುಬರುತ್ತಿದೆ.

	ಗ್ರಾಮಾಂತರ ಪ್ರದೇಶದ ಜನಜೀವನಕ್ಕೊಪ್ಪುವ ಉನ್ನತ ಶಿಕ್ಷಣ ವ್ಯವಸ್ಥೆ ಏರ್ಪಡುವುದು ನಿಧಾನವಾದಷ್ಟೂ ಅಲ್ಲಿನ ಜನಜೀವನ ಬರಡಾಗುತ್ತ ಬರುತ್ತದೆ. ಅಲ್ಲಿನವರು ಏಕ ಪ್ರಕಾರವಾಗಿ ನಗರಗಳಿಗೆ ವಲಸೆ ಬರುವುದು ಸಾಗಿದಂತೆ ಅಲ್ಲಿನ ವ್ಯವಸಾಯೋದ್ಯಮಕ್ಕೆ ತಕ್ಕಷ್ಟು ಜನಶಕ್ತಿ ದೊರಕದೆ ರಾಷ್ಟ್ರದಲ್ಲಿ ಆಹಾರ ಸಮಸ್ಯೆ ತಲೆದೋರುತ್ತದೆ. ನಗರಗಳಲ್ಲಿ ಜನಸಂಖ್ಯೆ ಅಧಿಕಗೊಂಡು ಅಲ್ಲಿನ ಜೀವನ ವಿವಿಧ ಸಮಸ್ಯೆಗಳಿಗೆ ಎಡೆಗೊಡುತ್ತವೆ. ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಸಾಮಥ್ರ್ಯ ಬಹು ಮಟ್ಟಿಗೆ ವ್ಯವಸಾಯೋದ್ಯಮವನ್ನು ಅವಲಂಬಿಸಿರುವುದರಿಂದ ಸ್ವಾಭಾವಿಕವಾಗಿ ಆರ್ಥಿಕ ಮುಗ್ಗಟ್ಟು ಹೆಚ್ಚುತ್ತ ಹೋಗುತ್ತದೆ. ಹಾಗೂ ಪ್ರಾಚೀನ ನಾಗರಿಕತೆ ಸಂಸ್ಕøತಿ ಸಂಪ್ರದಾಯಗಳು ಇಂದಿಗೂ ಉಳಿದುಕೊಂಡು ಬಂದಿರುವುದು ಹಳ್ಳಿಗಳಲ್ಲಿ. ಅವು ಬರಿದಾಗುತ್ತ ಹೋದಂತೆ ಆ ರಾಷ್ಟ್ರದ ಸಂಸ್ಕøತಿ ನಾಗರಿಕತೆಗಳೂ ಬಡವಾಗುತ್ತ ಹೋಗುತ್ತವೆ. ಅಧಿಕ ಸಂಖ್ಯೆಯಲ್ಲಿ ಜನ ನೆಲೆಸಿರುವ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿ ಆಗಲು ಅಲ್ಲಿನ ಜೀವನ ಆಕರ್ಷಣೀಯವೂ ಅಭಿವೃದ್ಧಿಶೀಲವೂ ಆಗಬೇಕು. ಅಲ್ಲಿನ ಯುವಜನ ವಿವಿಧ ಉದ್ಯಮಗಳಲ್ಲೂ ಸಾಹಸ ಕಾರ್ಯಗಳಲ್ಲೂ ತೊಡಗಲು ಅಲ್ಲಿ ಅವಕಾಶ ಕಲ್ಪಿಸಬೇಕು ; ಸಾಂಸ್ಕøತಿಕ ಮತ್ತು ಮನೋರಂಜನ ಸೌಲಭ್ಯಗಳೂ ಏರ್ಪಡಬೇಕು. ಮುಂದುವರಿದ ಅನೇಕ ರಾಷ್ಟ್ರಗಳಲ್ಲಿ ಜನ ಗಣಿ, ಕಾರ್ಖಾನೆ, ಕಾರ್ಯಾಲಯ, ಶಿಕ್ಷಣ ಸಂಸ್ಥೆ ಮುಂತಾದವುಗಳಲ್ಲಿ ಕೆಲಸಕ್ಕೆ ಸೇರಿ ಜೀವಿಸುತ್ತಿದ್ದರೂ ಇತರ ಜೀವನ ಸೌಲಭ್ಯಗಳು ನಗರಗಳಂತೆ ಗ್ರಾಮಾಂತರ ಪ್ರದೇಶಗಳಲ್ಲೂ ಹರಡಿರುವುದರಿಂದ ಅವೆರಡು ಜೀವನಗಳಲ್ಲಿ ಅಷ್ಟಾಗಿ ವ್ಯತ್ಯಾಸ ಕಂಡು ಬರುತ್ತಿಲ್ಲ. ಹಳ್ಳಿಗಳಲ್ಲಿ ವ್ಯವಸಾಯದಿಂದ ಜೀವಿಸತಕ್ಕವರೂ ವರ್ಷದ ಬಿಡುವಿನ ಕಾಲದಲ್ಲಿ ಇತರ ಉಪಕಸುಬುಗಳನ್ನೂ ಮಾಡಿ ಬದುಕಬಹುದು. ಅಂಥ ದೇಶಗಳಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಶಿಕ್ಷಣ ಸೌಲಭ್ಯಗಳಲ್ಲಿ ಅಷ್ಟಾಗಿ ವ್ಯತ್ಯಾಸ ಕಂಡುಬರುವುದಿಲ್ಲ.

	ಭಾರತದಲ್ಲಿ ಗ್ರಾಮೀಣ ಉನ್ನತ ಶಿಕ್ಷಣ : ರಾಷ್ಟ್ರದ ಒಟ್ಟು ಜನಸಂಖ್ಯೆಯ 70%ರಷ್ಟು ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಭಾರತ ಈಚೆಗೆ ಹಸಿರು ಕ್ರಾಂತಿಯನ್ನು ಸಾಧಿಸಿ ಆಹಾರದ ಬಗ್ಗೆ ಸ್ವಾವಲಂಬನೆಯನ್ನು ಸಾಧಿಸುವ ಹಾದಿಯಲ್ಲಿತ್ತು. ಆದರೆ ಈಚಿನ (1971 - 72) ಒಂದೆರಡು ವರ್ಷಗಳ ಕ್ಷಾಮಡಾಮರಗಳ ಫಲವಾಗಿ ಇಲ್ಲಿನ ಜನತೆ ಕಂಗೆಟ್ಟು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಬರುತ್ತಿರುವುದು ಕಂಡುಬರುತ್ತಿದೆ. ಗ್ರಾಮಗಳಲ್ಲಿ ವ್ಯವಸಾಯೇತರ ಕಸಬುಗಳು ವೃದ್ಧಿಯಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ನಗರಗಳಲ್ಲಿ ಅರ್ಧಕುಶಲವೃತ್ತಿಗಳಿಂದ ಹಿಡಿದು ವೈದ್ಯ, ನ್ಯಾಯ ಶಿಲ್ಪ ಇತ್ಯಾದಿ ಶಾಸ್ತ್ರೀಯ ವೃತ್ತಿಗಳವರೆಗಿನ ಎಲ್ಲ ಮಟ್ಟದ ಎಲ್ಲ ವಿಧದ ವೃತ್ತಿ ಶಿಕ್ಷಣ ಸೌಲಭ್ಯವೂ ಏರ್ಪಟ್ಟಿದ್ದರೂ ಗ್ರಾಮಗಳಲ್ಲಿ ಜನರು ಅಕ್ಷರಸ್ಥರಾಗುವಷ್ಟು ಮಾತ್ರ ಶಿಕ್ಷಣ ಸೌಲಭ್ಯವುಂಟು. ಪ್ರತಿ ರಾಜ್ಯದಲ್ಲೂ ಕೃಷಿ ವಿದ್ಯಾಲಯಗಳು ಏರ್ಪಟ್ಟಿದ್ದರೂ ಅಲ್ಲಿ ಶಿಕ್ಷಣ ಪಡೆದವರು ಗ್ರಾಮಗಳಲ್ಲಿರದೆ ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬರತಕ್ಕವರೇ. ಹಾಗೂ ಆ ವಿಶ್ವವಿದ್ಯಾಲಯಗಳು ಕೆಲವರಿಗೆ ಮಾತ್ರ ಶಿಕ್ಷಣವೀಯಬಲ್ಲವು. ಗ್ರಾಮಗಳಲ್ಲೆ ನಿತ್ಯಜೀವನಕ್ಕೂ ಕೃಷಿ ಆಧರಿತ ಉದ್ಯೋಗಗಳಿಗೂ ಅರ್ಧ ಮತ್ತು ಮಧ್ಯಮ ಮಟ್ಟದ ಕುಶಲಿ ಕಾರ್ಮಿಕರಿಗೆ ಶಿಕ್ಷಣವೀಯುವ ಸೌಲಭ್ಯ ಏರ್ಪಟ್ಟರೆ ಅಲ್ಲಿನವರು ಶಿಕ್ಷಣ ಪಡೆದು ಅಲ್ಲೇ ನೆಲೆಸಿ ಜೀವನದಲ್ಲಿ ಆಸಕ್ತಿ ವಹಿಸಿ ಅದನ್ನು ಸಮೃದ್ಧಗೊಳಿಸುವುದು ಸಾಧ್ಯ. ಭೂಹಿಡುವಳಿಗೆ ಮಿತಿ ಆಚರಣೆಗೆ ಬಂದಂತೆ, ಪ್ರತಿ ಕುಟುಂಬವೂ ಮುಂದೆ ವಿಭಾಗವಾಗುತ್ತ ಹೋದಂತೆ ವ್ಯವಸಾಯ ಅಲ್ಲಿನ ಜನತೆಗೆ ತಕ್ಕಷ್ಟು ಉದ್ಯೋಗವೊದಗಿಸಲಾರದ ಸನ್ನಿವೇಶ ಬರುತ್ತದೆ. ಅಲ್ಲಿನವರು ಇತರ ವೃತ್ತಿಗಳಲ್ಲಿ ಶಿಕ್ಷಣ ಪಡೆದಿದ್ದು ಇತರ ಕಸುಬುಗಳನ್ನೂ ಅನುಸರಿಸುವುದಾದರೆ ಪರಿಸ್ಥಿತಿ ಆಶಾದಾಯಕವಾದೀತು. ಗ್ರಾಮಾಂತರ ಪ್ರದೇಶ ಪರಿಸ್ಥಿತಿಯಲ್ಲಿ ಇಂಥ ಪರಿವರ್ತನೆಯನ್ನು ಕೃಷಿ ವಿಶ್ವವಿದ್ಯಾಲಯಗಳು ಉಂಟುಮಾಡಲಾರವು. ವ್ಯವಸಾಯೋದ್ಯಮವನ್ನು ಆಧಾರ ಮಾಡಿಕೊಂಡು ವಿವಿಧ ಉದ್ಯೋಗಗಳಿಗೆ ಶಿಕ್ಷಣವೀಯಬಲ್ಲ ಕೃಷಿ ಪಾಲಿಟೆಕ್ನಿಕ್ಕುಗಳು ಮಾತ್ರ ಆ ಕಾರ್ಯವನ್ನು ಸಾಧಿಸಬಲ್ಲವು.

	ರಾಷ್ಟ್ರದಲ್ಲಿ ಗ್ರಾಮೋದ್ಧಾರದ ಬಗ್ಗೆ ಬೇಕಾದಷ್ಟು ಪ್ರಚಾರ ನಡೆದಿದೆ. ಸಮುದಾಯ ಅಭಿವೃದ್ಧಿ ಯೋಜನೆಯೂ ಅಸ್ತಿತ್ವಕ್ಕೆ ಬಂದಿದೆ. ಅದರೆ ಅಲ್ಲಿನವರ ಪ್ರಯತ್ನವಿಲ್ಲದೆ ಆ ಕಾರ್ಯ ಸಿದ್ಧಿಸಲಾರದು. ಕೇವಲ ಕಾಳುಕಡ್ಡಿಗಳನ್ನು ಬೆಳೆಸಿಕೊಂಡು ಹೊಟ್ಟೆಹೊರೆದು ಕೊಳ್ಳುವ ವಿದ್ಯೆಯಲ್ಲಿ ಮಾತ್ರ ತಿಳಿವಳಿಕೆ ನೀಡುವುದರಿಂದ ಅವರು ತಮ್ಮ ಅಭಿವೃದ್ದಿಯನ್ನು ಸಾಧಿಸಿಕೊಳ್ಳಲಾರರು. ಗ್ರಾಮಾಂತರ ಪ್ರದೇಶಗಳಲ್ಲಿ ಆಗಬೇಕಾದ ಕಾರ್ಯ ಬೇಕಾದ ಹಾಗಿದೆ. ಕಟ್ಟಡದ ಕೆಲಸ, ರಸ್ತೆ ಸೇತುವೆಗಳ ಕೆಲಸ, ವ್ಯವಸಾಯೋಪಕರಣಗಳ ದುರಸ್ತು ಹೊಲಗದ್ದೆಗಳ ಮಣ್ಣಿನ ರಕ್ಷಣೆ, ಕಾಲುವೆಗಳ ನಿರ್ಮಾಣ, ಬಾವಿ ತೋಡುವುದು, ಮರಗೆಲಸ, ಕಬ್ಬಿಣದ ಕೆಲಸ, ರೇಡಿಯೊ, ಬೀಸುವ ಯಂತ್ರ ಮುಂತಾದವುಗಳ ದುರಸ್ತು, ವಿದ್ಯುಚ್ಛಕ್ತಿಯ ತಂತಿ ಮುಂತಾದವನ್ನು ಅಳವಡಿಸುವುದು-ಇವೇ ಮುಂತಾದ ಕಸಬುಗಳಿಗೆ ಶಿಕ್ಷಣ ದೊರೆತರೆ ಅವರು ಅಲ್ಲೇ ಉದ್ಯೋಗನಿರತರಾಗಬಹುದು. ಆಗ ಗ್ರಾಮಗಳ ಪುನರುಜ್ಜೀವನವಾಗಿ ಅಲ್ಲಿನ ಜೀವನ ಆಕರ್ಷಣಿಯ ಎನಿಸಬಲ್ಲದು. ಅಂಥ ಶಿಕ್ಷಣವನ್ನು ಪಾಲಿಟೆಕ್ನಿಕ್ಕುಗಳು ಮಾತ್ರ ಒದಗಿಸಬಲ್ಲವು. ಅಂಥ ಸಂಸ್ಥೆಗಳನ್ನು ಪ್ರಧಾನವಾಗಿ ತನ್ನ ಅಂಗ ಸಂಸ್ಥೆಗಳಾಗಿಯೋ ಅಂಗೀಕೃತ ಸಂಸ್ಥೆಗಳಾಗಿಯೋ ಹೊಂದಿರುವ ಗ್ರಾಮೀಣ ವಿಶ್ವವಿದ್ಯಾಲಯಗಳ ಸ್ಥಾಪನೆಯನ್ನು 1949ರಲ್ಲಿ ರಾಧಾಕೃಷ್ಣನ್ ಶಿಕ್ಷಣ ಆಯೋಗ ಸಲಹೆ ಮಾಡಿತು. ಅವುಗಳ ಸ್ಥಾಪನೆಯ ಅಗತ್ಯವನ್ನು ಕುರಿತು ಪ್ರಸ್ತಾಪಿಸುತ್ತ `ಅದರಿಂದ ಗ್ರಾಮಜೀವನ ಚೈತನ್ಯದಿಂದ ಮಿಡಿಯುವಂತಾಗಿ ಆಕರ್ಷಣೀಯವೂ ಶ್ರೀಮಂತವೂ ಆಗಬಲ್ಲದು; ಆಗ ಅದು ನಗರ ಜೀವನಕ್ಕೆ ಸರಿಸಮವಾಗಿ ನಿಂತು ಆ ಮೂಲಕ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಸಾಧನೆಯಾಗಬಲ್ಲದು ಎಂದು ಒತ್ತಿ ಹೇಳಿತು. ಅಂಥ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಬೆಂಬಲವಾಗಿರುವಂತೆ ಶಾಲಾಮಟ್ಟದ ಶಿಕ್ಷಣವನ್ನೂ ಸೂಕ್ತರೀತಿಯಲ್ಲಿ ಪುನವ್ರ್ಯವಸ್ಥೆಗೊಳಿಸಬೇಕೆಂದೂ ಸಲಹೆ ಮಾಡಿತು. ಭಾರತ ಸರ್ಕಾರ ಗ್ರಾಮೀಣ ವಿಶ್ವವಿದ್ಯಾಲಯಗಳನ್ನು ಇನ್ನೂ ಸ್ಥಾಪನೆ ಮಾಡದಿದ್ದರೂ ಆ ಮುಖವಾದ ಪ್ರಯತ್ನವನ್ನೇನೂ ನಡೆಸಿದೆ. ರಾಧಾಕೃಷ್ಣನ್ ಶಿಕ್ಷಣ ಆಯೋಗದ ಸಲಹೆಯನ್ನನುಸರಿಸಿ ಭಾರತ ಸರ್ಕಾರ 1954 ರಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಸದ್ಯದಲ್ಲಿ ಖಾಸಗಿಯವರು ಸ್ವಪ್ರೇರಣೆಯಿಂದ ನಡೆಸುತ್ತಿರುವ ಗ್ರಾಮೀಣ ಉನ್ನತ ಶಿಕ್ಷಣದ ಪ್ರಮಾಣವನ್ನು ಪರಿಶೀಲಿಸಿ ಆ ಮುಖವಾಗಿ ಮುಂದೆ ಕೈಕೊಳ್ಳಬೇಕಾದ ಕಾರ್ಯವನ್ನು ಸ್ಪಷ್ಟವಾಗಿ ಸೂಚಿಸಬೇಕೆಂದು ಕೇಳಿತು. ಅದು ನೀಡಿದ ಸಲಹೆಯಂತೆ 1956ರಲ್ಲಿ ರಾಷ್ಟ್ರೀಯ ಗ್ರಾಮೀಣ ಉನ್ನತ ಶಿಕ್ಷಣ ಸಲಹಾ ಮಂಡಳಿಯನ್ನು ರಚಿಸಿ ಅದರ ಮುಖ್ಯ ಕಾರ್ಯಾಲಯವನ್ನು ದೆಹಲಿಯಲ್ಲಿ ಸ್ಥಾಪಿಸಿತು. ಮಂಡಲಿಗೆ ಕೇಂದ್ರದ ಶಿಕ್ಷಣ ಸಚಿವರು ಅಧ್ಯಕ್ಷರು ಶಿಕ್ಷಣದ ಉಪಸಲಹೆಗಾರರು ಕಾರ್ಯದರ್ಶಿಗಳು ; ಜೊತೆಗೆ ಮಂಡಲಿಯಲ್ಲಿ ರಾಜ್ಯಗಳಿಂದ ಹನ್ನೊಂದು ಮಂದಿ ನಾಮಕರಣ ಮಾಡಿದ ಪ್ರತಿನಿಧಿಗಳೂ ಕೇಂದ್ರದ ಆರೋಗ್ಯ, ವ್ಯವಸಾಯ, ಗುಡಿಸಿಲು ಕೈಗಾರಿಕೆ, ಸಮುದಾಯಾಭಿವೃದ್ಧಿ ಯೋಜನೆ, ಹಣಕಾಸು ಈ ಸಚಿವಾಲಯಗಳಿಂದ ಒಬ್ಬೊಬ್ಬ ಪ್ರತಿನಿಧಿಯೂ ಅಂತರ ವಿಶ್ವವಿದ್ಯಾಲಯ ಮಂಡಲಿ, ವಿಶ್ವವಿದ್ಯಾಲಯದ ಧನ ಆಯೋಗ ಇವುಗಳಿಂದ ಒಬ್ಬೊಬ್ಬ ಪ್ರತಿನಿಧಿಯೂ ಸದಸ್ಯರಾಗಿರುವರು. ಸರ್ಕಾರ ಮಂಡಲಿಗೆ ಈ ಮುಂದಿನ ಕರ್ತವ್ಯಗಳನ್ನು ವಿಧಿಸಿತು : 1 ಗ್ರಾಮೀಣ ಶಿಕ್ಷಣವನ್ನು ಉತ್ತಮಪಡಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ಸಲಹೆ ನೀಡುವುದು ; 2 ಗ್ರಾಮೀಣ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವೆನಿಸುವ ಸಲಹೆ ನೀಡುತ್ತ ಅವುಗಳ ಕಾರ್ಯದಲ್ಲಿ ಯೋಜನೆಯನ್ನು ಸಾಧಿಸುವುದು; 3 ನಿಯೋಜಿತ ಯೋಜನೆಗಳನ್ನು ಕಾರ್ಯಗತ ಮಾಡುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಕ್ತ ರೀತಿಯ ಸಲಹೆ ನೀಡುವುದು ; 4 ಗ್ರಾಮೀಣ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬರಲು ಅಗತ್ಯವಾದ ಕಾರ್ಯಕ್ರಮಗಳನ್ನು ಆರಂಭಿಸುವುದು ; ಮತ್ತು ಅಗತ್ಯವೆನಿಸುವ ಸಂಶೋಧನೆಗಳನ್ನು ನಡೆಸುವುದು ; 5 ಗ್ರಾಮೀಣ ಉನ್ನತ ಶಿಕ್ಷಣದಲ್ಲಿ ತೊಡಗಿರುವ ಸಂಸ್ಥೆಗಳಿಗೆ ಸಹಾಯ ಧನ ನೀಡಲು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು ; 6 ಗ್ರಾಮೀಣ ಶಿಕ್ಷಣದ ಉದ್ದೇಶ ಸಾಧನೆಗಾಗಿ ಸಮಸ್ಯೆಗಳನ್ನು ಪರಿಶೀಲಿಸಿ ಸಲಹೆ ನೀಡಲು ತಜ್ಞರ ಸಮಿತಿಗಳನ್ನು ನೇಮಿಸುವುದು ; 7 ತನಗೆ ವಹಿಸಿದ ಕರ್ತವ್ಯಗಳನ್ನು ನಿರ್ವಹಿಸಲು ಅಗತ್ಯವೆನಿಸುವ ಕಾನೂನುಗಳನ್ನು ರಚಿಸುವುದು.

	ಮೇಲಿನ ಮಂಡಲಿಯ ಸಲಹೆಯಂತೆ ಭಾರತ ಸರ್ಕಾರ ಈಗಾಗಲೆ ಹದಿನೈದು ಗ್ರಾಮೀಣ ವಿದ್ಯಾ ಸಂಸ್ಥೆಗಳನ್ನು (ರೂರಲ್ ಇನ್ಸ್‍ಟಿಟ್ಯೂಟ್) ಸ್ಥಾಪಿಸಿದೆ. ಅವುಗಳಲ್ಲಿ ಸಾಮಾನ್ಯವಾಗಿ ಮುಂದೆ ಸೂಚಿಸಿರುವ ಪಠ್ಯಕ್ರಮಗಳನ್ನು ಏರ್ಪಡಿಸಿದೆ.
	1 ಗ್ರಾಮಸೇವೆಯ ಮೂರು ವರ್ಷದ ಡಿಪ್ಲೊಮ ಪಠ್ಯಕ್ರಮ.
	2 ವಾಸ್ತು (ಸಿವಿಲ್) ಮತ್ತು ಗ್ರಾಮೀಣ ಶಿಲ್ಪಗಳಲ್ಲಿ ಮೂರು ವರ್ಷದ ಡಿಪ್ಲೊಮ ಪಠ್ಯಕ್ರಮ.
	3 ಕೃಷಿ ವಿಜ್ಞಾನದ ಎರಡು ವರ್ಷದ ಸರ್ಟಿಫಿಕೇಟ್ ಪಠ್ಯಕ್ರಮ
	4 ಗ್ರಾಮ ನೈರ್ಮಲ್ಯದ ತನಿಖಾಧಿಕಾರಿಗಳ (ಸ್ಯಾನಿಟರಿ ಇನ್ಸ್ಪೆಕ್ಟರ್ಸ್) ಒಂದು ವರ್ಷದ ಪಠ್ಯಕ್ರಮ.
	5 ಗ್ರಾಮನೈರ್ಮಲ್ಯದ ತನಿಖಾಧಿಕಾರಿಗಳ ಉನ್ನತ ಮಟ್ಟದ ಒಂದು ವರ್ಷದ ಪಠ್ಯಕ್ರಮ.
	6 ಗ್ರಾಮೀಣ ಸಾಮಾಜಿಕ ವಿಜ್ಞಾನ ಮತ್ತು ಸಮುದಾಯಾಭಿವೃದ್ಧಿಯ ಎರಡು ವರ್ಷದ ಸ್ನಾತಕೋತ್ತರ
	ಡಿಪ್ಲೊಮ ಪಠ್ಯಕ್ರಮ. 
	7 ಗ್ರಾಮೀಣ ಅರ್ಥಶಾಸ್ತ್ರ ಮತ್ತು ಸಹಕಾರಗಳಲ್ಲಿ ಎರಡು ವರ್ಷದ ಸ್ನಾತಕೋತ್ತರ ಡಿಪ್ಲೊಮ ಪಠ್ಯಕ್ರಮ.
	8 ಮೂರು ವರ್ಷದ ಡಿಪ್ಲೊಮ ತರಗತಿಗೆ ಸೇರಲು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಂದು ವರ್ಷದ ಸಿದ್ಧತಾ ಪಠ್ಯಕ್ರಮ.

	ಮೇಲಿನ ಪಠ್ಯಕ್ರಮಗಳು ಎಲ್ಲ ಹದಿನೈದು ಗ್ರಾಮೀಣ ವಿದ್ಯಾಸಂಸ್ಥೆಗಳಲ್ಲೂ ಆರಂಭವಾಗಿಲ್ಲ. ಆಯಾ ಪ್ರದೇಶಕ್ಕೆ ಅಗತ್ಯವೆನಿಸುವ ಪಠ್ಯಕ್ರಮಗಳು ಒಂದೊಂದರಲ್ಲೂ ಆರಂಭವಾಗಿವೆ. ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಹದಿನೈದು ಗ್ರಾಮೀಣ ವಿದ್ಯಾ ಸಂಸ್ಥೆಗಳನ್ನು ಮುಂದೆ ಸೂಚಿಸಿದೆ :

	1 ಗಾಂಧಿ ಗ್ರಾಮ ರೂರಲ್ ಇನ್ಸ್‍ಟಿಟ್ಯೂಟ್, ಮಧುರೆ (ತಮಿಳುನಾಡು).
	2 ರಾಮಕೃಷ್ಣಾಶ್ರಮ ರೂರಲ್ ಇನ್ಸ್‍ಟಿಟ್ಯೂಟ್, ಕೊಯಮತ್ತೂರು (ತಮಿಳುನಾಡು).
	3 ಲೋಕ ಭಾರತಿ ರೂರಲ್ ಇನ್ಸ್‍ಟಿಟ್ಯೂಟ್, ಸನೋಸರ (ಗುಜರಾತು).
	4 ಅಮರಾವತಿ ರೂರಲ್ ಇನ್ಸ್‍ಟಿಟ್ಯೂಟ್, ಅಮರಾವತಿ (ಮಹಾರಾಷ್ಟ್ರ).
	5 ಕರ್ಮವೀರ ಹೈಯರ್ ರೂರಲ್ ಇನ್ಸ್‍ಟಿಟ್ಯೂಟ್, ಗರ್ಗೋಟಿ (ಮಹಾರಾಷ್ಟ್ರ).
	6 ವಿದ್ಯಾಭವನ ರೂರಲ್ ಇನ್ಸ್‍ಟಿಟ್ಯೂಟ್, ಉದಯಪುರ (ರಾಜಸ್ಥಾನ).
	7 ಬಲವಂತ್ ವಿದ್ಯಾಪೀಠ ರೂರಲ್ ಇನ್ಸ್‍ಟಿಟ್ಯೂಟ್, ಬಿಚ್ಚುರಿ (ಆಗ್ರ).
	8 ಜೆಮಿಯಮಿಲಿಯ ರೂರಲ್ ಇನ್ಸ್‍ಟಿಟ್ಯೂಟ್, ನವದೆಹಲಿ.
	9 ಉನ್ನತ ಅಧ್ಯಯನದ ರೂರಲ್ ಇನ್ಸ್‍ಟಿಟ್ಯೂಟ್, ಬಿರೌಲಿ (ಬಿಹಾರ್).
	10 ಕಸ್ತೂರಿ ಬಾ ರೂರಲ್ ಇನ್ಸ್‍ಟಿಟ್ಯೂಟ್, ರಾಜಪುರ (ಪಂಜಾಬ್).
	11 ರೂರಲ್ ಇನ್ಸ್‍ಟಿಟ್ಯೂಟ್, ವಾರ್ಧಾ (ಮಹಾರಾಷ್ಟ್ರ).
	12 ರೂರಲ್ ಇನ್ಸ್‍ಟಿಟ್ಯೂಟ್, ಹನುಮನಮಟ್ಟಿ (ಕರ್ನಾಟಕ).
	13 ಕಸ್ತೂರಿ ಬಾ ಗ್ರಾಮ ರೂರಲ್ ಇನ್ಸ್‍ಟಿಟ್ಯೂಟ್, ಇಂದೂರು (ಮಧ್ಯಪ್ರದೇಶ).
	14 ರೂರಲ್ ಇನ್ಸ್‍ಟಿಟ್ಯೂಟ್, (ತವನೂರು ಕೇರಳ).
	15 ರೂರಲ್ ಇನ್ಸ್‍ಟಿಟ್ಯೂಟ್, ಶ್ರೀನಿಕೇತನ (ಪಶ್ಚಿಮ ಬಂಗಾಳ).

	ಮೇಲೆ ಸೂಚಿಸಿದ ಗ್ರಾಮೀಣ ಉನ್ನತ ವಿದ್ಯಾ ಸಂಸ್ಥೆಗಳು ಒಂದೊಂದು ರಾಜ್ಯ ಸರ್ಕಾರದ ಶಿಕ್ಷಣವ್ಯವಸ್ಥೆಗೆ ಒಳಪಟ್ಟಿದ್ದರೂ ಯಾವೊಂದು ವಿಶ್ವವಿದ್ಯಾಲಯಕ್ಕೂ ಅಂಗಸಂಸ್ಥೆಯಾಗಿರದೆ ತನ್ನವೇ ಆದ ಡಿಪ್ಲೊಮ ಸರ್ಟಿಫಿಕೇಟ್ ಮುಂತಾದ ಪದವಿಗಳನ್ನು ನೀಡುವ ಅಧಿಕಾರ ಪಡೆದಿರುತ್ತದೆ. ಅವುಗಳಲ್ಲಿ ಹೈಯರ್ ಸೆಕೆಂಡರಿ ಅಥವಾ ಪ್ರಿ ಯೂನಿವರ್ಸಿಟಿ ತರಗತಿಯಲ್ಲಿ ತೆರ್ಗಡೆಯಾದವರಿಗೆ ಸಾಮಾನ್ಯವವಾಗಿ ಪ್ರವೇಶಾವಕಾಶವನ್ನು ಕೊಡಲಾಗುವುದು. ಈ ಗ್ರಾಮೀಣ ವಿದ್ಯಾ ಸಂಸ್ಥೆಗಳಲ್ಲಿ ಸಾಮಾನ್ಯ (ಸಾಂಸ್ಕøತಿಕ) ವಿಷಯಗಳ ಜೊತೆಗೆ ಗ್ರಾಮ ಜೀವನದ ನಸಮಸ್ಯೆಗಳನ್ನೂ ನಾಗರಿಕತೆ ಮತ್ತು ಭಾಷೆಯ ಇತಿಹಾಸ ಮುಂತಾದ ವಿಷಯಗಳನ್ನೂ ಬೋಧಿಸಲಾಗುವುದು. ಗ್ರಾಮೀಣ ಸಂಸ್ಕøತಿ ಮತ್ತು ಜೀವನ ಸ್ವರೂಪದ ವ್ಯಾಸಂಗಕ್ಕೆ ಸಂಬಂಧಿಸಿದ ಜ್ಞಾನವನ್ನು ಕುರಿತು ಸಂಶೋಧನೆ ನಡೆಸುವುದಕ್ಕೂ ಜನತೆಯಲ್ಲಿ ಪ್ರಸಾರ ಮಾಡುವುದಕ್ಕೂ ಅವಕಾಶವುಂಟು. ಅಲ್ಲಿ ವ್ಯವಸ್ಥೆಗೊಳಿಸಿರುವ ಗ್ರಾಮಸೇವೆಯ ಮೂರು ವರ್ಷದ ಡಿಪ್ಲೊಮವನ್ನು ಕೆಲವು ರಾಜ್ಯಗಳೂ ಕೇಂದ್ರ ಸರ್ಕಾರವೂ ಸಾಂಪ್ರದಾಯಿಕ ವಿಶ್ವವಿದ್ಯಾಶಲಯದ ಬಿ. ಎ., ಬಿ. ಎಸ್‍ಇ., ಇತ್ಯಾದಿ ಪ್ರಥಮ ಪದವಿಗೆ ಸಮವೆಂದು ಉದ್ಯೋಗ ನೀಡುವ ಉದ್ದೇಶಕ್ಕಾಗಿ ಅಂಗೀಕರಿಸಿದೆ. ಹಾಗೆಯೇ 1961ರಲ್ಲಿ ಗ್ರಾಮೀಣ ಸಾಮಾಜಿಕ ವಿಜ್ಞಾನ ಮತ್ತು ಸಮುದಾಯಾಭಿವೃದ್ಧಿಯ ಎರಡು ವರ್ಷದ ಸ್ನಾತಕೋತ್ತರ ಡೊಪ್ಲೋಮವನ್ನು ಅರ್ಥಶಾಸ್ತ್ರ ಮತ್ತು ಸಹಕಾರಗಳ ಎರಡು ವರ್ಷದ ಸ್ನಾತಕೋತ್ತರ ಡಿಪ್ಲೊಮವನ್ನು ಎಂ.ಎ., ಎಂ.ಎಸ್‍ಸಿ., ಮುಂತಾದ ಪದವಿಗಳಿಗೂ ಸಮವೆಂದು ಅಂಗೀಕರಿಸಿದೆ. ಆದರೆ ಜನತೆಯಾಗಲಿ ವಿದ್ಯಾರ್ಥಿಗಳಾಗಲಿ, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಾಗಲಿ ಅವುಗಳ ಬಗ್ಗೆ ಅಂಥ ಆಸಕ್ತಿಯನ್ನು ತೋರುತ್ತಿಲ್ಲ. ಸರ್ಕಾರಗಳೂ ಅವನ್ನು ಮನಃಪೂರ್ವಕವಾಗಿ ಅಂಗೀಕರಿಸಿದಂತೆ ಕಾಣುವುದಿಲ್ಲ. ಇದಕ್ಕೆ ಕಾರಣಗಳು ಇಲ್ಲದೇ ಇಲ್ಲ. ಮೊದಲನೆಯದಾಗಿ ಗ್ರಾಮೀಣ ಉನ್ನತ ಶಿಕ್ಷಣ ಈಗ ತಾನೆ ಪ್ರಯೋಗಾತ್ಮಕವಾಗಿ ಆಚರಣೆಗೆ ಬಂದಿದ್ದೂ ಇನ್ನೂ ಸೂಕ್ತ ರೀತಿಯಲ್ಲಿ ವ್ಯವಸ್ಥೆಗೊಂಡಿಲ್ಲ ; ಎರಡನೆಯದಾಗಿ, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಅವುಗಳ ಬಗ್ಗೆ ಸಹಾನುಭೂತಿಯಿಲ್ಲದೆ ಅನುಮಾನಿಸುತ್ತಿವೆ ; ಮೂರನೆಯದಾಗಿ , ಅಲ್ಲಿ ಶಿಕ್ಷಣ ಪಡೆದು ಬಂದ ವಿದ್ಯಾರ್ಥಿಗಳು ಇನ್ನೂ ತಮ್ಮ ಕಾರ್ಯ ದಕ್ಷತೆಯನ್ನು ಅಷ್ಟಾಗಿ ವ್ಯಕ್ತಪಡಿಸಿಲ್ಲ ; ಕೊನೆಯದಾಗಿ ದೆಹಲಿಯ ರಾಷ್ಟ್ರೀಯ ಉನ್ನತ ಶಿಕ್ಷಣ ಮಂಡಲಿ ಆ ವಿದ್ಯಾಲಯಗಳಲ್ಲಿ ಸಮಾಯೋಜನೆ ಏರ್ಪಡಿಸುತ್ತಿದ್ದರೂ ಅವುಗಳ ಶೈಕ್ಷಣಿಕ ಕಾರ್ಯಕ್ರಮಾದಿಗಳನ್ನು ನಿರ್ದೇಶಿಸಲು ಗ್ರಾಮೀಣ ವಿಶ್ವವಿದ್ಯಾಲಯಗಳನ್ನು ಇನ್ನೂ ಆರಂಭಿಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವುಗಳ ಭವಿಷ್ಯವೇನು ಎಂಬ ಬಗ್ಗೆ ಸ್ವಾಭಾವಿಕ ಪ್ರಶ್ನೆಯೇಳುತ್ತದೆ. ಅವುಗಳಿಗೂ ಮೂಲ ಶಿಕ್ಷಣ ಶಾಲೆಗಳಿಗೆ ಒದಗಿದ ಗತಿಯೇ ಒದಗೀತೋ ಏನೊ ಎಂದು ಶಂಕಿಸುವವರೂ ಇರುವರು. ಈಚೆಗೆ ಭಾರತ ಸರ್ಕಾರ ನೇಮಿಸಿದ್ದ ಕೊಠಾರಿ ಶಿಕ್ಷಣ ಆಯೋಗ 1966ರ ತನ್ನ ವರದಿಯಲ್ಲಿ ಅದೇಕೊ ಗ್ರಾಮೀಣ ಉನ್ನತ ಶಿಕ್ಷಣವನ್ನಾಗಲಿ, ಆಗತಾನೆ ಆರಂಭವಾಗಿ ಅಸ್ತಿತ್ವದಲ್ಲಿದ್ದ ಗ್ರಾಮೀಣ ವಿದ್ಯಾಸಂಸ್ಥೆಗಳನ್ನಾಗಲಿ ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಬಹುಶಃ ಅದು ತನ್ನ ಕಾರ್ಯವ್ಯಾಪ್ತಿಯಲ್ಲಿ ಆ ಪರಿಶೀಲನೆ ಸೇರಿದ್ದರೂ ಆ ಕ್ಷೇತ್ರದಲ್ಲಿ ನಡೆಯುತ್ತಿದ್ದ ಪ್ರಯೋಗವನ್ನು ಕಾದು ನೋಡಬೇಕಾಗಿದೆಯೆಂದು ಕೈಬಿಟ್ಟಿದ್ದರೂ ಬಿಟ್ಟಿರಬಹುದು.

	ಗ್ರಾಮೀಣ ಉನ್ನತ ಶಿಕ್ಷಣಕ್ಕೆ ಹಣಕಾಸು : ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಉನ್ನತ ಶಿಕ್ಷಣದಂತೆ ಗ್ರಾಮೀಣ ಉನ್ನತ ಶಿಕ್ಷಣವೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಹಣದ ಸಹಾಯಕ್ಕಾಗಿ ಅವಲಂಬಿಸಬೇಕಾಗುತ್ತದೆ. ಜೊತೆಗೆ ಗ್ರಾಮಾಂತರ ಪ್ರದೇಶಗಳ ದಾನಿಗಳು ನೀಡುವ ಪುದುವಟ್ಟುಗಳಿಂದ ಬರುವ ಆದಾಯ, ವಿದ್ಯಾರ್ಥಿಗಳು ಕೊಡುವ ಬೋಧನೆಯ ಶುಲ್ಕ ಮುಂತಾದ ಮೂಲಗಳಿಂದಲೂ ಹಣ ಪಡೆದುಕೊಳ್ಳಬಹುದು. ಅಗತ್ಯಬಿದ್ದರೆ ಭೂ ಕಂದಾಯದ ಹಾಗೂ ವ್ಯವಸಾಯದ ಆದಾಯ ತೆರಿಗೆಯ ಸ್ವಲ್ಪ ಭಾಗವನ್ನು ಅದಕ್ಕಾಗಿ ಸರ್ಕಾರ ವಿನಿಯೋಗಿಸಬಹುದು. ಸದ್ಯದಲ್ಲಿ ಭಾರತ ಸರ್ಕಾರ ಆ ವಿದ್ಯಾಲಯಗಳಿಗಾಗಿ ತಕ್ಕಷ್ಟು ಹಣವನ್ನು ಖರ್ಚುಮಾಡುತ್ತಿಲ್ಲವೆಂದೇ ಹೇಳಬೇಕು. 1969 - 70ನೆಯ ಸಾಲಿನಲ್ಲಿ 24.5 ಲಕ್ಷ ರೂಪಾಯಿಗಳನ್ನು 1970 - 71ನೆಯ ಸಾಲಿನಲ್ಲಿ 26.035 ಲಕ್ಷ ರೂಪಾಯಿಗಳನ್ನು ಖರ್ಚುಮಾಡಿದ್ದರೂ ಸಾಂಪ್ರದಾಯಿಕ ಉನ್ನತ ಶಿಕ್ಷಣಕ್ಕೆ ಮಾಡುತ್ತಿರುವ ಹಣದೊಡನೆ ಹೋಲಿಸಿದರೆ ಇದು ತೀರ ಅಲ್ಪವೆಂದೇ ಹೇಳಬೇಕು.

	ಕೃಷಿ ಪಾಲಿಟೆಕ್ನಿಕ್ಕುಗಳು : ಸಾಂಪ್ರದಾಯಿಕ ಉನ್ನತ ಶಿಕ್ಷಣದ ಪುನವ್ರ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ವ್ಯಾಪಕವಾದ ಪರಿಶೀಲನೆ ನಡೆಸಿ ಮಹತ್ತ್ವದ ಸಲಹೆಗಳನ್ನು ಮಂಡಿಸಿರುವ ಕೊಠಾರಿ ಶಿಕ್ಷಣ ಆಯೋಗ ಗ್ರಾಮೀಣ ಉನ್ನತ ಶಿಕ್ಷಣವನ್ನು ಕೈ ಬಿಟ್ಟಿದ್ದರೂ ಅದಕ್ಕೆ ಸಂಬಂಧಿಸಿದಂಥ ಕೃಷಿ ಪಾಲಿಟೆಕ್ನಿಕ್ಕುಗಳ (ಅಗ್ರಿಕಲ್ಚರಲ್ ಪಾಲಿಟೆಕ್ನಿಕ್ಸ್) ಸ್ಥಾಪನೆಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿರುವುದು. ಅಲ್ಲಿ ಗ್ರಾಮವಾಸಿಗಳಿಗೆ ನಿತ್ಯ ಜೀವನಕ್ಕೂ ಅವರ ಮುಖ್ಯ ಕಸಬಾದ ವ್ಯವಸಾಯಕ್ಕೂ ಸಂಬಂಧಿಸಿದ ಕಸಬುಗಳಲ್ಲಿ ಅರ್ಧ ಮತ್ತು ಮಧ್ಯ ಮಟ್ಟದ ಕುಶಲ ಕಾರ್ಮಿಕರಿಗೂ ತಂತ್ರಜ್ಞರಿಗೂ ಗ್ರಾಮವಾಸಿಗಳಲ್ಲಿ ಜ್ಞಾನ ಪ್ರಸಾರ ಕಾರ್ಯವನ್ನು ಕೈಕೊಳ್ಳುವ ಗ್ರಾಮ ಸೇವಕರಿಗೂ ವ್ಯವಸಾಯೋತ್ಪನ್ನ ವಸ್ತುಗಳಿಗೆ ಸಂಬಂಧಿಸಿದ ಉದ್ಯೋಗ ಮತ್ತು ವ್ಯಾಪಾರಗಳಲ್ಲಿ ತೊಡಗುವವರಿಗೂ ಶಿಕ್ಷಣವೀಯಬೇಕೆಂದು ಸೂಚಿಸಿ ಅಲ್ಲಿಗೆ ಮೆಟ್ರಿಕ್ಯುಲೇಶನ್ ಶಿಕ್ಷಣ ಮುಗಿಸಿದವರನ್ನು ಸೇರಿಸಿಕೊಳ್ಳಬೇಕೆಂದು ಸಲಹೆ ಮಾಡಿದೆ. ಅಲ್ಲದೆ ವ್ಯವಸಾಯೋದ್ಯಮಕ್ಕೆ ಸಂಬಂಧಿಸಿದ ಕಸಬುಗಳಲ್ಲಿ ತರಬೇತು ನೀಡುವ ಆ ಪಾಲಿಟೆಕ್ನಿಕ್ಕುಗಳನ್ನು ಅಲ್ಲಿ ಕೃಷಿ ವಿಶ್ವವಿದ್ಯಾಲಯಕ್ಕೆ ಲಗತ್ತಿಸಬಹುದೆಂದೂ ಸೂಚಿಸಿದೆ. ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಪಾಲಿಟೆಕ್ನಿಕ್ಕುಗಳಲ್ಲಿ ಮೇಲೆ ಸೂಚಿಸಿದ ವೃತ್ತಿ ಶಿಕ್ಷಣದ ತರಗತಿಗಳನ್ನು ಆರಂಭಿಸಬಹುದೆಂದು ಅಭಿಪ್ರಾಯ ಪಡುತ್ತ ಒಂದೊಂದು ಪಾಲಿಟೆಕ್ನಿಕ್ಕೂ ಅನೇಕ ವೃತ್ತಿಗಳಲ್ಲಿ ತರಗತಿಗಳನ್ನು ವ್ಯವಸ್ಥೆಗೊಳಿಸಿಕೊಂಡು ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಒದಗಿಸುವಂತಾಗಬೇಕೆಂದು ಆಶಿಸಿದೆ. ಬೇಸಾಯಕ್ಕೆ ಸಂಬಂಧಿಸಿದ ಫಾರಮ್ ಮೇಕ್ಯಾನಿಕ್, ಪ್ರಯೋಗಾಲಯದ ಸಹಾಯಕರು, ಮರಗೆಲಸದವರು, ಕಬ್ಬಿಣದ ಕೆಲಸದವರು, ರೇಡಿಯೊ, ಬೀಸುವ ಯಂತ್ರ, ನೀರೆತ್ತುವ ಪಂಪು ಮುಂತಾದವನ್ನು ದುರಸ್ತು ಮಾಡುವವರು, ವಿದ್ಯುತ್ ತಂತಿಗಳನ್ನು ಮನೆ, ಅಂಗಡಿ, ಕಾರ್ಖಾನೆ ಮುಂತಾದವುಗಳಿಗೆ ಅಳವಡಿಸುವವರು, ವ್ಯವಸಾಯದ ಸಹಕಾರ ಸಂಘ ನಡೆಸುವವರು, ಕ್ರಿಮಿನಾಶಕಗಳನ್ನು ತಯಾರಿಸುವವರು, ಅವನ್ನು ಪ್ರಯೋಗಿಸುವವರು, ಕೃಷಿ ಬ್ಯಾಂಕಿಂಗ್ ಕೆಲಸಗಾರರು, ಗೊಬ್ಬರ ತಯಾರಿಸುವವರು, ಹಾಗೂ ಹಣ್ಣು ರಕ್ಷಿಸುವವರು, ಪಶು ಸಂಗೋಪನ, ಫಲಪುಷ್ಪಗಳ ಬೇಸಾಯ, ಅರಣ್ಯ ರಕ್ಷಣೆ, ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟಕ್ಕೆ ಸಿದ್ಧಪಡಿಸುವವರು-ಇವರೇ ಮುಂತಾದ ಕೆಲಸಗಾರರಿಗೆ ಶಿಕ್ಷಣವೀಯುವುದರಿಂದ ಅವರೆಲ್ಲ ಬಹು ಮಟ್ಟಿಗೆ ಗ್ರಾಮಗಳಲ್ಲೆ ಉದ್ಯೋಗಗಳನ್ನು ಹುಡುಕಿಕೊಂಡು ಅಲ್ಲೆ ನೆಲೆಸಬಲ್ಲರು. ಕೊಠಾರಿ ಶಿಕ್ಷಣ ಆಯೋಗ ಆ ಪಾಲಿಟೆಕ್ನಿಕ್ಕುಗಳನ್ನು ಕೃಷಿ ವಿಶ್ವವಿದ್ಯಾಲಯಗಳಿಗೆ ಲಗತ್ತಿಸಬೇಕೆಂದು ಯೋಚಿಸಿದ್ದರಿಂದ ಗ್ರಾಮ ಜೀವನಕ್ಕೆ ಅಗತ್ಯವೆನಿಸುವ ಇತರ ಅನೇಕ ವೃತ್ತಿ ಶಿಕ್ಷಣಕ್ಕೆ ಅಲ್ಲಿ ಅವಕಾಶ ಕಲ್ಪಿಸಬೇಕೆಂದು ಸೂಚಿಸಿಲ್ಲ. ಹೇಗೆ ಆಗಲಿ ಸಣ್ಣ ಪುಟ್ಟ ಉದ್ಯೋಗಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹರಡುವುದಾದರೆ, ಪಾಲಿಟೆಕ್ನಿಕ್ಕಿನಲ್ಲಿ ವೃತ್ತಿಶಿಕ್ಷಣ ಪಡೆದ ವಿದ್ಯಾರ್ಥಿಗಳು ಅಲ್ಲಿ ಉದ್ಯೋಗ ನಿರತರಾಗಿ ಅವರು ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ಆ ಮೂಲಕ ಗ್ರಾಮ ಜೀವನ ಆಕರ್ಷಕವಾಗಿ ಸಮೃದ್ಧವಾಗುತ್ತದೆ. ಸದ್ಯದಲ್ಲಿ ಭಾರತ ಸರ್ಕಾರ ಇಂಥ ಆರು ಪಾಲಿಟೆಕ್ನಿಕ್ಕುಗಳನ್ನು ಸ್ಥಾಪಿಸಲು ಆಲೋಚಿಸಿದೆ.

	ಕೊಠಾರಿ ಶಿಕ್ಷಣ ಆಯೊಗ ಸೂಚಿಸಿರುವ ಕೃಷಿ ಪಾಲಿಟೆಕ್ನಿಕ್ಕುಗಳು ಪೂರ್ಣವಾಗಿ ವೃತ್ತಿಮುಖವಾದ ಗ್ರಾಮೀಣ ಶಿಕ್ಷಣಕ್ಕೆ ಮೀಸಲಾಗುವುದಾದರೆ ಸಾಹಿತ್ಯ, ಲಲಿತ ಕಲೆ, ಸಂಸ್ಕøತಿ, ಇತಿಹಾಸ ಮುಂತಾದ ವಿಷಯಗಳನ್ನು ಉನ್ನತ ಶಿಕ್ಷಣವೀಯಲು ಈಗಾಗಲೇ ಆರಂಭವಾಗಿರುವ ಗ್ರಾಮೀಣ ವಿದ್ಯಾಸಂಸ್ಥೆಗಳನ್ನು ವೃದ್ಧಿಪಡಿಸಿಕೊಳ್ಳಬಹುದು. ಪಾಲಿಟೆಕ್ನಿಕ್ಕುಗಳು ಅಲ್ಲಿನ ಆರ್ಥಿಕ ಜೀವನವನ್ನು ಉತ್ತಮಪಡಿಸಲು ನೆರವಾದರೆ ಗ್ರಾಮೀಣ ವಿದ್ಯಾಸಂಸ್ಥೆಗಳು ಅಲ್ಲಿನ ಸಾಂಸ್ಕøತಿಕ ಜೀವನವನ್ನು ಉತ್ತಮಪಡಿಸಲು ನೆರವಾಗಬೇಕು., ಆದ್ದರಿಂದ ಸದ್ಯದಲ್ಲಿ ಅಷ್ಟಾಗಿ ಜನಪ್ರಿಯತೆಗಳಿಸಲಾರದಾಗಿರುವ ಅ ವಿದ್ಯಾಸಂಸ್ಥೆಗಳನ್ನು ಕೈ ಬಿಡುವ ಬದಲು ಸೂಕ್ತರೀತಿಯಲ್ಲಿ ಮಾರ್ಪಡಿಸಿ ಅಭಿವೃದ್ಧಿಪಡಿಸುವುದು ಅಗತ್ಯ. ಅವು ಮಿಕ್ಕ ಉನ್ನತ ಶಿಕ್ಷಣ ಸಂಸ್ಥೆಗಳಿಗಿರುವ ಗೌರವವನ್ನು ಪಡೆಯಬೇಕಾದರೆ ಗ್ರಾಮೀಣ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಅವುಗಳಿಗೆ ಅಂಗ ಸಂಸ್ಥೆಗಳನ್ನಾಗಿ ಮಾಡುವುದು ಅಗತ್ಯ. ಅದರಿಂದ ಇತರ ವಿಶ್ವವಿದ್ಯಾಲಯಗಳು ಅವು ಕೊಡುವ ಡಿಪ್ಲೊಮ, ಸರ್ಟಿಫಿಕೇಟ್ ಮುಂತಾದ ಪದವಿಗಳನ್ನು ಅಂಗೀಕರಿಸುವುದಕ್ಕೂ ಅನುಕೂಲವಾಗುತ್ತದೆ. ಈ ಸಲಹೆ ಕಾರ್ಯರೂಪಕ್ಕೆ ಬಂದಾಗ ಸಾಂಪ್ರದಾಯಿಕ ಉನ್ನತ ಶಿಕ್ಷಣದಂತೆ ಗ್ರಾಮೀಣ ಉನ್ನತ ಶಿಕ್ಷಣ ಸಾಂಸ್ಕøತಿಕ ಮತ್ತು ವೃತ್ತಿ ಅಥವಾ ತಾಂತ್ರಿಕ-ಈ ಎರಡು ಮುಖಗಳಲ್ಲೂ ತನ್ನದೇ ಆದ ರೀತಿಯ ಶಿಕ್ಷಣವನ್ನು ವ್ಯವಸ್ಥೆ ಮಾಡಿಕೊಂಡಂತಾಗುತ್ತದೆ.

	ವಿಶ್ವವಿದ್ಯಾಲಯದ ಪೂರ್ವದ ಶಿಕ್ಷಣದ ಪುನವ್ರ್ಯವಸ್ಥೆ : ಸದ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣದ ಮಟ್ಟದಲ್ಲಿ ಭಾರತದಲ್ಲಿ ಗ್ರಾಮ ಮತ್ತು ನಗರಗಳ ಶಾಲೆಗಳ ಪಠ್ಯಕ್ರಮದಲ್ಲಿ ಅಂಥ ವ್ಯತ್ಯಾಸವೇನೂ ಕಂಡುಬರುವುದಿಲ್ಲ. ಹಾಗೆಯೆ ಎರಡು ಕಡೆಯೂ ಒಂದೇ ಪಠ್ಯಪುಸ್ತಕಗಳೂ ಬಳಕೆಯಲ್ಲಿವೆ. ಅಲ್ಲಿನ ಪಠ್ಯಕ್ರಮದಲ್ಲಿ ಗ್ರಾಮ ಜೀವನಕ್ಕೆ ಸಂಬಂಧಿಸಿದ ಜ್ಞಾನ, ಅನುಭವ, ಕೌಶಲ, ಮನೋಭಾವ ಇತ್ಯಾದಿ ಅಂಶಗಳನ್ನು ಪ್ರಧಾನವಾಗಿ ದೊರಕಿಸುವ ಅವಕಾಶವಿರಬೇಕು. ಪಠ್ಯಪುಸ್ತಕಗಳು ನಮ್ಮ ಜನತೆಯ ಸಂಸ್ಕøತಿ, ಸಂಪ್ರದಾಯ, ಇತಿಹಾಸ, ಸಾಹಿತ್ಯ ಮುಂತಾದ ಅಂಶಗಳನ್ನು ಪ್ರಧಾನವಾಗಿ ಕುರಿತವಾಗಿರಬೇಕು. ಎಂದರೆ ಆಧುನಿಕ ಜೀವನಕ್ಕೆ ಪೋಷಕವಾಗಿರುವ ಇತರ ಅಂಶಗಳನ್ನು ಕಡೆಗಣಿಸಬೇಕೆಂದು ಹೇಳುವ ಮಾತಿದಲ್ಲ. ಅಲ್ಲಿ ಶಿಕ್ಷಣ ಪಡೆದ ಮಕ್ಕಳು ಗ್ರಾಮ ಜೀವನದಲ್ಲಿ ಆಸಕ್ತಿ ವಹಿಸುವಂತೆಯೂ ಅದರ ಪುರೋಭಿವೃದ್ಧಿಗೆ ದುಡಿಯಬೇಕೆಂಬ ಆಕಾಂಕ್ಷೆಯನ್ನು ಮೂಡಿಸುವಂತೆಯೂ ಅವು ರಚನೆಯಾಗಬೇಕು.

	ಸಾಮಾನ್ಯವಾಗಿ ಕೆಳಗಿನ ಮತ್ತು ಮೇಲಿನ ಹಂತಗಳ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮಗಳಲ್ಲಿ ಸೂಕ್ತರೀತಿಯ ಸಂಬಂಧವಿರುವುದು ಅಗತ್ಯ. ಗ್ರಾಮೀಣ ಉನ್ನತ ಶಿಕ್ಷಣದ ಯಶಸ್ಸಿಗೆ ಅಲ್ಲಿನ ಶಾಲಾಪಠ್ಯಕ್ರಮದಲ್ಲಿ ಮುಂದೆ ಉನ್ನತ ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡತಕ್ಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳು ಸೇರಿರಬೇಕು. ಈ ತತ್ತ್ವವನ್ನು ಆಧಾರಮಾಡಿಕೊಂಡು ಗ್ರಾಮಾಂತರ ಪ್ರದೇಶಗಳ ಪಠ್ಯಕ್ರಮ, ಪಠ್ಯಪುಸ್ತಕ, ತರಗತಿಯ ಮತ್ತು ಇತರ ಕಾರ್ಯಕ್ರಮಗಳು ಪುನವ್ರ್ಯವಸ್ಥೆಯಾಗಬೇಕು. ಆಗ ಮಾತ್ರ ನೂತನವಾಗಿ ರೂಪುಗೊಳ್ಳುತ್ತಿರುವ ಗ್ರಾಮೀಣ ವಿದ್ಯಾಸಂಸ್ಥೆಗಳಲ್ಲೂ ಕೃಷಿ ಪಾಲಿಟೆಕ್ನಿಕ್ಕುಗಳಲ್ಲೂ ವ್ಯಾಸಂಗ ಮಾಡಲು ಮುಂದೆ ಬರುವಂತಾಗುತ್ತದೆ. ಆ ಮೂಲಕ ಅವನ್ನು ರೂಪಿಸಿರುವ ಉದ್ದೇಶ ಈಡೇರಲು ಅವಕಾಶ ಕಲ್ಪನೆಯಾಗುತ್ತದೆ.						(ಎನ್.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ